ಗೋವರ್ಧನ ಕ್ಷೇತ್ರಕ್ಕೆ ಮಂತ್ರಾಲಯ ಮಠಾಧೀಶರಾದ ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಭೇಟಿ..!!

ಗೋವರ್ಧನ ಕ್ಷೇತ್ರಕ್ಕೆ ಮಂತ್ರಾಲಯ ಮಠಾಧೀಶರಾದ ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಭೇಟಿ..!!
0Shares

ಬೆಂಗಳೂರು: ಪರಮಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಶ್ರೀಕ್ಷೇತ್ರ ಮಂತ್ರಾಲಯದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಇಂದು ಬಸವನಗುಡಿಯಲ್ಲಿರುವ ಭವ್ಯ ಗೋವರ್ಧನ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಗೋವರ್ಧನ ಕ್ಷೇತ್ರದ ವೈಭವ, ಆಧ್ಯಾತ್ಮಿಕ ವಾತಾವರಣ ಹಾಗೂ ಅಲ್ಲಿನ ವಿನ್ಯಾಸವನ್ನು ಅವಲೋಕಿಸಿದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು, ಈ ಕ್ಷೇತ್ರದ ನಿರ್ಮಾಣದ ಹಿಂದೆ ಇರುವ ಪರಮಪೂಜ್ಯ ಪುತ್ತಿಗೆ ಶ್ರೀಗಳ ದೂರದೃಷ್ಟಿ, ಸಂಕಲ್ಪ ಮತ್ತು ಭಗವದ್ಭಕ್ತಿಯನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗೋವರ್ಧನ ಗೋಪಾಲನೇ ಸಮಸ್ತ ಜಗತ್ತಿನ ರಕ್ಷಕ. ಶಾಸ್ತ್ರಗಳು ಭಗವಂತನನ್ನು ಹೃದಯಗುಹೆಯಲ್ಲಿ ಧ್ಯಾನಿಸಬೇಕೆಂದು ಉಪದೇಶಿಸುತ್ತವೆ. ಆ ತತ್ತ್ವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಗೋವರ್ಧನ ಕ್ಷೇತ್ರದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಔಚಿತ್ಯಪೂರ್ಣವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ, ಪುತ್ತಿಗೆ ಮಠ ಮತ್ತು ಮಂತ್ರಾಲಯ ಮಠಗಳ ನಡುವೆ ಅನಾದಿಕಾಲದಿಂದಲೂ ಇರುವ ಶಾಸ್ತ್ರೀಯ ಹಾಗೂ ಆಧ್ಯಾತ್ಮಿಕ ಬಾಂಧವ್ಯವನ್ನು ಸ್ಮರಿಸಿದ ಅವರು, ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಪರಮಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಗೋವರ್ಧನ ಲೀಲೆಯನ್ನು ಸ್ಮರಿಸಿ, “ಗೋವರ್ಧನವನ್ನು ಧರಿಸಿದ ಶ್ರೀಕೃಷ್ಣನ ಮಹಿಮೆಯನ್ನು ಅರಿತು ಇಂದ್ರನು ಬಂದು ಪ್ರಾರ್ಥನೆ ಸಲ್ಲಿಸಿದಂತೆ, ಇಂದು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆಗಮನವೂ ಅದೇ ಭಾವವನ್ನು ಮೂಡಿಸಿದೆ. ಅವರ ಈ ಆಗಮನ ನಮಗೆ ಅಪಾರ ಸಂತೋಷವನ್ನುಂಟು ಮಾಡಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರನ್ನು ಪೂರ್ಣಕುಂಭ, ವೇದಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಂಪ್ರದಾಯಬದ್ಧವಾಗಿ ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಗಳ ವಿದ್ವಾಂಸರು, ವೇದಪಾಠಶಾಲೆಯ ವಿದ್ಯಾರ್ಥಿಗಳು, ಗೋವರ್ಧನ ಕ್ಷೇತ್ರದ ಪದಾಧಿಕಾರಿಗಳು, ಭಕ್ತರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now