
ಶಿರಸಿ: ಚಿರತೆಯ 10 ಉಗುರುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಶಿರಸಿ ತಾಲೂಕಿನ ವ್ಯಕ್ತಿಯೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಿರಸಿ ತಾಲೂಕಿನ ಕಲ್ಲಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿರುವ ಲಕ್ಷ್ಮಣ ಶೇಷಪ್ಪ ನಾಯ್ಕ ಅವರ ಮನೆಯಲ್ಲಿ ಚಿರತೆಯ ಉಗುರುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಂದು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ 10 ಚಿರತೆಯ ಉಗುರುಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಬಳೇಕೊಪ್ಪ ಗ್ರಾಮದ ನಿವಾಸಿ, ಸುಮಾರು 36 ವರ್ಷದ ಲಕ್ಷ್ಮಣ ಶೇಷಪ್ಪ ನಾಯ್ಕ ಅವರನ್ನು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಶಿರಸಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. (ಭಾ.ಅ.ಸೇ., ಪ್ರಭಾರ) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಸುಗಾವಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರೇಮಕುಮಾರ ಕಾರಭಾರಿ, ಅರಣ್ಯ ಪಾಲಕರಾದ ಸಂತೋಷ ಕಕ್ಕಳಮೇಲಿ ಮತ್ತು ರವಿ ಜಾಡರ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಹೆಚ್.ಎಸ್. ಈಶ್ವರಪ್ಪ ಭಾಗವಹಿಸಿದ್ದರು.
ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದ್ದು, ಚಿರತೆಯ ಉಗುರುಗಳು ಎಲ್ಲಿಂದ ಬಂದವು ಹಾಗೂ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now