ಉಪ್ಪೂರಿನಲ್ಲಿ ಬೀದಿ ನಾಯಿ ಶೆಲ್ಟರ್‌ಗೆ ಭಾರೀ ವಿರೋಧ; ಗ್ರಾಮಸ್ಥರ ಆಕ್ರೋಶ

ಉಪ್ಪೂರಿನಲ್ಲಿ ಬೀದಿ ನಾಯಿ ಶೆಲ್ಟರ್‌ಗೆ ಭಾರೀ ವಿರೋಧ; ಗ್ರಾಮಸ್ಥರ ಆಕ್ರೋಶ
0Shares

ಉಪ್ಪೂರು: ಗ್ರಾಮದ ಸರ್ಕಾರಿ ಜಾಗದಲ್ಲಿ ಬೀದಿ
ನಾಯಿಗಳಿಗಾಗಿ ಶೆಲ್ಟರ್ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಭೆಯು ಶುಕ್ರವಾರ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ರಮೇಶ್ ಕರ್ಕೇರ, ಉಪೂರಿನ ಸರ್ಕಾರಿ ಜಾಗದಲ್ಲಿ ಬೀದಿ ನಾಯಿ ಶೆಲ್ಟರ್ ನಿರ್ಮಿಸುವ ಬದಲು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರ ಅಭಿಪ್ರಾಯವನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾದರೆ ಸಾರ್ವಜನಿಕರ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸದಸ್ಯ ಅಶ್ವಿನ್ ರೋಚ್ ಮಾತನಾಡಿ, ಶೆಲ್ಟರ್ ನಿರ್ಮಾಣಕ್ಕೆ ಗ್ರಾಮಸ್ಥರ ತೀವ್ರ ವಿರೋಧವಿದೆ. ಶೆಲ್ಟರ್‌ಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಜನವಸತಿ ಪ್ರದೇಶವಿದ್ದು ಭವಿಷ್ಯದಲ್ಲಿ ರೋಗರುಜಿನ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಸ್ಥಳದಲ್ಲಿ ಕಾಮಗಾರಿ ಆರಂಭಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಶೆಲ್ಟರ್ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಜಾಗ ಎತ್ತರ ಪ್ರದೇಶದಲ್ಲಿದ್ದು, ಅಲ್ಲಿಂದ ಹರಿಯುವ ತ್ಯಾಜ್ಯ ನೀರು ಕೆಳಭಾಗದ ಬೆಳ್ಳಾರು ತೋಡಿಗೆ ಸೇರುವ ಸಾಧ್ಯತೆಯಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ಬಾವಿ ನೀರು ಕಲುಷಿತಗೊಳ್ಳುವ ಅಪಾಯವಿದೆ ಎ೦ದು ಆತಂಕ ವ್ಯಕ್ತಪಡಿಸಿದರು.

ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ ಅವರು, ಸರ್ವೆ ನಂಬರ್ 293/1 ರಲ್ಲಿ 3 ಎಕ್ರೆ 20 ಸೆಂಟ್ಸ್ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ ಅದರ ಹಂಚಿಕೆ ಆಗಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರಗಳನ್ನು ನೀಡಲು ಬಾಕಿ ಇದ್ದು, ಅದನ್ನು ಬಿಟ್ಟು ಏಕಾಏಕಿ ಸಾರ್ವಜನಿಕರಿಗೆ ವಿರುದ್ಧವಾದ ಬೀದಿನಾಯಿ ಶೆಲ್ಟರ್ ನಿರ್ಮಾಣ ಮಾಡು ತ್ತಿರುವುದು ಖೇದಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.*

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now