
ಉಪ್ಪಿನಂಗಡಿ ಜುಲೈ 16 : ಖಾಸಗಿ ಬಸ್‌ಗಳ ನಡುವಿನ ಟೈಮಿಂಗ್ಸ್ ವಿಚಾರಕ್ಕೆ ಹೊಡೆದಾಡಿಕೊಂಡ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕರಿದ್ದ ಬಸ್ಸಿನೊಳಗೇ ನುಗ್ಗಿದ ಮತ್ತೊಂದು ಬಸ್ ನ ನಿರ್ವಾಹಕನೊಬ್ಬ ಕಬ್ಬಿಣದ ರಾಡ್‌ನಿಂದ ಮತ್ತೊಬ್ಬ ನಿರ್ವಾಹಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದು, ಪರಸ್ಪರ ಹೊಡೆದಾಟದಲ್ಲಿ ಇಬ್ಬರೂ ನಿರ್ವಾಹಕರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಮಂಗಳೂರು-ಉಪ್ಪಿನಂಗಡಿ ಮಾರ್ಗದ ‘ಅರಾಫಾ’ ಬಸ್ ನಿರ್ವಾಹಕ ನೌಶಾದ್ ಹಾಗೂ ‘ಲಕ್ಷ್ಮೀ’ ಬಸ್ ನಿರ್ವಾಹಕ ಖಲಂದರ ಯಾನೆ ಶಾಹೀದ್ ಪರಸ್ಪರ ಹಲ್ಲೆ ಮಾಡಿಕೊಂಡವರು ಮಂಗಳವಾರ ಸಂಜೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಉಭಯ ಬಸ್‌ಗಳ ನಡುವೆ ಟೈಮಿಂಗ್ಸ್ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ‘ಲಕ್ಷ್ಮೀ’ ಬಸ್ಸಿನೊಳಗೆ ಪ್ರಯಾಣಿಕರು ಕುಳಿತಿದ್ದಾಗಲೇ ಕೆರಳಿದ ಅರಾಫಾ ಬಸ್ ನಿರ್ವಾಹಕ ನೌಶಾದ್ ಏಕಾಏಕಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಒಳನುಗ್ಗಿದ್ದಾನೆ.
ಪ್ರಯಾಣಿಕರ ಕಣ್ಣೆದುರೇ ಖಲಂದರ ಯಾನೆ ಶಾಹೀದ್ ತಲೆ ಹಾಗೂ ಮೈಮೇಲೆ ಕಬ್ಬಿಣದ ರಾಡ್‌ನಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.
ಕಬ್ಬಿಣದ ರಾಡ್ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶಾಹೀದ್ ಕೂಡ ತಿರುಗಿಬಿದ್ದು ನೌಶಾದ್ ಮೇಲೆ ಕೈಯಿಂದ ಪ್ರತಿದಾಳಿ ನಡೆಸಿದ್ದಾನೆ. ಬಸ್ಸಿನ ಸೀಟುಗಳ ಮಧ್ಯೆ ನಡೆದ ಈ ಗಲಾಟೆಯಿಂದ ಇಬ್ಬರ ತಲೆ ಹಾಗೂ ಕೈಕಾಲುಗಳಿಗೆ ಗಾಯಗಳಾಗಿದೆ. ಸದ್ಯ ಗಾಯಗೊಂಡಿರುವ ಇಬ್ಬರನ್ನೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು, ಪ್ರಯಾಣಿಕರ ಜೀವಕ್ಕೆ ಆತಂಕ ತಂದಿಟ್ಟ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಇಬ್ಬರ ಪ್ರಕರಣ ದಾಖಲಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now