ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯಾದ ಕದಳೀ ವಿಶ್ವದರ್ಶನ ಚಿತ್ರಕಲಾ ಸ್ಪರ್ಧೆ:162 ವಿದ್ಯಾರ್ಥಿಗಳ ಭಾಗಿ..!

ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯಾದ ಕದಳೀ ವಿಶ್ವದರ್ಶನ ಚಿತ್ರಕಲಾ ಸ್ಪರ್ಧೆ:162 ವಿದ್ಯಾರ್ಥಿಗಳ ಭಾಗಿ..!
0Shares

ಉಡುಪಿ: ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾಪ್ರತಿಭೆ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಉಡುಪಿಯ ಬೀಡಿನಗುಡ್ಡೆ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ನವೆಂಬರ್ 22ರಂದು ನಡೆದ ಈ ಸ್ಪರ್ಧೆಯಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಳೆ ಕೃಷಿ ಹಾಗೂ ಬಾಳೆಯ ಮಹತ್ವವನ್ನು ಆಧರಿಸಿದ ವಿಷಯದಡಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಒಟ್ಟು 162 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೋದೆ ಶ್ರೀ ವಾದಿರಾಜ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಪ್ರಶಂಸನಾ ಪತ್ರ ಹಾಗೂ ಶ್ರೀ ದೇವರ ಪ್ರಸಾದ ನೀಡಿ ಹರಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಕಲಾರಂಗದ ಸದಸ್ಯರು ಹಾಗೂ ಸೋದೆ ಶ್ರೀ ವಾದಿರಾಜ ಮಠದ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಮೂಡಿಬಂದ ಚಿತ್ರಕೃತಿಗಳ ಪೈಕಿ ಅತ್ಯುತ್ತಮ ಐದು ಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿ ಕಲಾವಿದರಿಗೆ ಡಿಸೆಂಬರ್ 1ರಂದು ಸಂಜೆ ನಡೆಯಲಿರುವ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಕೃಷಿಯ ಬಗ್ಗೆ ಆಸಕ್ತಿ ಹಾಗೂ ಸೃಜನಶೀಲ ಅಭಿವ್ಯಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಸ್ಪರ್ಧೆಯು ‘ಕದಳೀ ವಿಶ್ವದರ್ಶನ’ದ ಸಾಮಾಜಿಕ ಮತ್ತು ಶೈಕ್ಷಣಿಕ ಆಶಯಗಳಿಗೆ ಅರ್ಥಪೂರ್ಣ ಕೊಡುಗೆಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now