ಉಡುಪಿ : ಕ್ರಿಸ್ಮಸ್ ಡಿಲೈಟ್ಸ್ ಗೆ ಆಗಮಿಸುತ್ತಿದ್ದಾರೆ ಗೋವಾದ ಸುನಾಮಿ ಮಾರ್ಕ್ ರೆವಲಾನ್

ಉಡುಪಿ : ಕ್ರಿಸ್ಮಸ್ ಡಿಲೈಟ್ಸ್ ಗೆ ಆಗಮಿಸುತ್ತಿದ್ದಾರೆ ಗೋವಾದ ಸುನಾಮಿ ಮಾರ್ಕ್ ರೆವಲಾನ್
0Shares

ಗೋವಾ ಎಂದರೆ ಕೇವಲ ಬೀಚ್, ಸೀಫುಡ್, ಎಂಜಾಯ್ಮೆಂಟ್ ಜೀವನ ಮಾತ್ರ ಅಲ್ಲ. ಗೋವಾ ಎಂದರೆ ಸಂಗೀತ. ಆ ಸಂಗೀತದ ಲೋಕದಲ್ಲಿ ಇಂದು ಮಿಂಚುತ್ತಿರುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರವೆಂದರೆ ಮಾರ್ಕ್ ರೆವಲಾನ್ ಫೆರ್ನಾಂಡಿಸ್. ಅವರ ಧ್ವನಿ ಕೇಳಿದರೆ ಗೋವನ್ ಮನಸ್ಸು ಅರಳುತ್ತದೆ, ಅವರ ಹಾಡು ಕೇಳಿದರೆ ಕಾಲುಗಳು ತಾವಾಗಿಯೇ ಕುಣಿಯಲು ಶುರು ಮಾಡುತ್ತವೆ.

ಮಾರ್ಕ್ ರೆವಲಾನ್ ಅವರು ದಕ್ಷಿಣ ಗೋವಾದ ಲೂಟೋಲಿಮ್ ಎಂಬ ಸುಂದರ ಗ್ರಾಮದಲ್ಲಿ ಆಗಸ್ಟ್ 14 ರಂದು ಜನಿಸಿದರು. ಚಿಕ್ಕಂದಿನಿಂದಲೇ ಸಂಗೀತ ಅವರ ರಕ್ತದಲ್ಲಿ ಹರಿದಾಡುತ್ತಿತ್ತು. ಅವರು ಯಾವುದೇ ದೊಡ್ಡ ಸಂಗೀತ ಶಾಲೆಗೆ ಹೋಗಿ ಕಲಿತವರಲ್ಲ. ಸ್ವಯಂ ಕಲಿತ ಸಂಗೀತಗಾರರಾದ ಅವರು, ತಮ್ಮ ಪ್ರತಿಭೆ ಮತ್ತು ಶ್ರಮದಿಂದಲೇ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.

1996 ರಲ್ಲಿ ತಮ್ಮ ಅಣ್ಣ ಲ್ಯೂಕ್ ಅವರ ಬ್ಯಾಂಡ್‌ನಲ್ಲಿ ಡ್ರಮ್ಮರ್ ಮತ್ತು ಗಾಯಕರಾಗಿ ತಮ್ಮ ಸಂಗೀತ ಪಯಣವನ್ನು ಆರಂಭಿಸಿದರು. ಆ ನಂತರ ಸಹೋದರರಿಬ್ಬರೂ ಸೇರಿ ‘ಹೆಡ್‌ಲೈನ್ಸ್’ ಎಂಬ ಬ್ಯಾಂಡ್ ಸ್ಥಾಪಿಸಿದರು. ಅಲ್ಲಿಂದ ಅವರ ಯಶಸ್ಸಿನ ಪಯಣಕ್ಕೆ ಬ್ರೇಕ್ ಸಿಗಲೇ ಇಲ್ಲ. ಇಂದು ಮಾರ್ಕ್ ರೆವಲಾನ್ ಅವರ ಸ್ವಂತ ಬ್ಯಾಂಡ್ ‘ಮಾರ್ಕ್ ರೆವಲಾನ್ ಬ್ಯಾಂಡ್’ ಗೋವಾದ ಅತ್ಯಂತ ಜನಪ್ರಿಯ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಅವರು ಕೇವಲ ಗಾಯಕರಲ್ಲ, ಡ್ರಮ್ಮರ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್ ಕೂಡ ಹೌದು

ಅವರ ‘ಗೋಯೆಂಚೊ ಸಾಯ್ಬ್’ ಎಂಬ ಹಾಡು ಯೂಟ್ಯೂಬ್‌ನಲ್ಲಿ ಸುಮಾರು 1 ಮಿಲಿಯನ್ ವೀಕ್ಷಣೆಗಳನ್ನು ಪಡೆದು ದಾಖಲೆ ಸೃಷ್ಟಿಸಿತು. ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರಿಗೆ ಅರ್ಪಿಸಿದ ‘ಗೋಯೆಂಕರಾಂಚೆಯಾ ಮೊಗಾಚೊ ಸಂತ ಫ್ರಾನ್ಸಿಸ್ ಅಂಚೊ’ ಹಾಡು ಗೋವನ್ ಜನರ ಹೃದಯವನ್ನು ಮುಟ್ಟಿತು. ‘ಡಿಸ್ ಉಡೆಲೊ’, ‘ಪಾಪ್ಲೆಟ್’, ‘ಸೆಲಿನಾ’, ‘ಮಸಾಲಾ’ ನಂತಹ ಹಾಡುಗಳು ಇಂದಿಗೂ ಗೋವಾದ ಪ್ರತಿಯೊಂದು ಪಾರ್ಟಿ, ಮದುವೆ, ಹಬ್ಬಗಳಲ್ಲಿ ಮೊಳಗುತ್ತವೆ.

ಗೋವಾದ ಗಡಿಯನ್ನು ದಾಟಿ ಮಾರ್ಕ್ ರೆವಲಾನ್ ಅವರ ಕೀರ್ತಿ ಜಗತ್ತಿನಾದ್ಯಂತ ಪಸರಿಸಿದೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ದುಬೈ, ಕತಾರ್, ಕುವೈಟ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಅವರು ಪ್ರದರ್ಶನ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಗೋವನ್ ಜನರಿಗೆ ಅವರ ಹಾಡು ಎಂದರೆ ತಾಯ್ನಾಡಿನ ನೆನಪು. ಅದಕ್ಕಾಗಿಯೇ ಗೋವನ್ ಜನರು ಅವರನ್ನು ಪ್ರೀತಿಯಿಂದ “ಗೋವಾದ ಫ್ರೆಡ್ಡಿ ಮರ್ಕ್ಯುರಿ” ಎಂದು ಕರೆಯುತ್ತಾರೆ.

ವೇದಿಕೆಯ ಮೇಲೆ ಸುಂಟರಗಾಳಿಯಂತೆ ಕುಣಿಯುವ ಮಾರ್ಕ್, ವೇದಿಕೆಯ ಹೊರಗೆ ಅತ್ಯಂತ ವಿನಮ್ರ ಮತ್ತು ಸರಳ ವ್ಯಕ್ತಿ. ಇದೇ ಅವರ ದೊಡ್ಡ ಗುಣ. ಅವರು ತಮ್ಮ ಸಂಗೀತದ ಮೂಲಕ ಗೋವನ್ ಕೊಂಕಣಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಯುವ ಪೀಳಿಗೆಗೆ ಅವರು ದೊಡ್ಡ ಸ್ಫೂರ್ತಿ. ಮಾರ್ಕ್ ರೆವಲಾನ್ ಕೇವಲ ಒಬ್ಬ ಗಾಯಕರಲ್ಲ, ಅವರು ಗೋವಾದ ಸಂಗೀತದ ರಾಯಭಾರಿ. ಅವರ ಧ್ವನಿಯಲ್ಲಿ ಗೋವಾದ ಮಣ್ಣಿನ ಪರಿಮಳವಿದೆ, ಅವರ ಹಾಡಿನಲ್ಲಿ ಗೋವನ್ ಜನರ ಪ್ರೀತಿಯಿದೆ. ಇಂತಹ ಮಹಾನ್ ಕಲಾವಿದ ಮೊತ್ತ ಮೊದಲ ಬಾರಿಗೆ ಉಡುಪಿಯ ಹೃದಯ ಭಾಗದಲ್ಲಿ ಬೃಹದಾಕಾರದ ವೇದಿಕೆಯಲ್ಲಿ ಸಂಗೀತದ ಸುನಾಮಿ ಹರಿಸಲಿದ್ದಾರೆ. ಈ ಭಾಗದ ಅವರ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮತ್ತು ಕ್ರಿಸ್ಮಸ್ ಪ್ರೇಮಿಗಳಿಗೆ ಎಲ್ಲರಿಗೂ ಸಂಗೀತದ ರಸದೌತಣ ದೊರಕಲಿದೆ ಅದಂತೂ ನಿಜ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಘಟಕರಾದ ಸ್ಟೀವನ್ ಕುಲಾಸೊ 9901701381 ಮತ್ತು ಜೀವನ್ ಡಿಸೋಜಾ ರವರನ್ನು ಸಂಪರ್ಕಿಸಬಹುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now