ನೆಹರೂರವರದ್ದು ನೈತಿಕ ಹಾಗೂ ಹಾಗೂ ಮಾನವೀಯ ಕಲ್ಪನೆಯ ಭಾರತ – ಡಾ. ವಾಸುದೇವ ಬೆಳ್ಳೆ

ನೆಹರೂರವರದ್ದು ನೈತಿಕ ಹಾಗೂ ಹಾಗೂ ಮಾನವೀಯ ಕಲ್ಪನೆಯ ಭಾರತ – ಡಾ. ವಾಸುದೇವ ಬೆಳ್ಳೆ
0Shares

ಜಾತ್ಯತೀತ ಭಾರತವೇ ನೆಹರೂ ಅವರು ಮುಖ್ಯ ನಿರೀಕ್ಷೆ ಮತ್ತು ಬೇಡಿಕೆ ಆಗಿತ್ತು. ಅವರು ಜಾತ್ಯತೀತವನ್ನು ಬಹಳ ಮುಖ್ಯವಾದ ಮೌಲ್ಯದ ಎಂಬುದಾಗಿ ಗ್ರಹಿಸಿದ್ದರು. ನೆಹರೂ ಅವರದ್ದು ನೈತಿಕ ಹಾಗೂ ಮಾನವೀಯ ಪ್ರಗತಿಯ ಕಲ್ಪನೆ ಆಗಿತ್ತು. ದೇಶವನ್ನು ಮಾರಿಕೊಳ್ಳುವ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಅಭಿವೃದ್ದಿ ಅವರದ್ದಾಗಿರಲಿಲ್ಲ ಎಂದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಹೇಳಿದ್ದಾರೆ.

ರಥಬೀದಿ ಗೆಳೆಯರು(ರಿ.)ಉಡುಪಿ ವತಿಯಿಂದ ನೆಹರೂ ಜಯಂತಿ ಪ್ರಯುಕ್ತ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ‘ನೆಹರೂ ಕನಸಿನ ಭಾರತ ಮತ್ತು ವರ್ತಮಾನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ನೆಹರೂ ಕನಸಿನ ಭಾರತವು ಕೇವಲ ನೆಹರೂ ಅವರನ್ನು ಮಾತ್ರ ಒಳಗೊಂಡಿಲ್ಲ. ಅದರಲ್ಲಿ ಗಾಂಧಿ, ಅಂಬೇಡ್ಕರ್, ಎಡಪಂಥೀಯ ಸೇರಿದಂತೆ ಎಲ್ಲ ರೀತಿಯ ಚಿಂತನೆಗಳೂ ಇವೆ. ನೆಹರೂ ಕನಸಿನ ಭಾರತವು ಎಲ್ಲ ಧಾರೆಗಳ ಕೂಸು ಆಗಿದೆ. ನೆಹರು ಇತಿಹಾಸ ಅಂದರೆ ಕಟ್ಟುವ ಪ್ರಕ್ರಿಯೆ ಹೊರತು ವಿಘಟನೆಯ ಕ್ರಿಯೆ ಅಲ್ಲ ಎಂದು ಅವರು ತಿಳಿಸಿದರು.

ಪ್ರಧಾನಿ ಪಟ್ಟಕ್ಕೆ ಗಾಂಧಿಯ ಆಯ್ಕೆ ನೆಹರೂ ಅವರೇ ಆಗಿದ್ದರು. ಇಡೀ ಭಾರತವನ್ನು ಅರಿತಿರುವುದರಲ್ಲಿ ಮತ್ತು ನವ ಭಾರತವನ್ನು ಕಟ್ಟುವ ಸಾಮರ್ಥ್ಯದಲ್ಲಿ ನೆಹರೂ, ಎಲ್ಲ ನಾಯಕರುಗಳಿಗಿಂತ ಮುಂಚೂಣಿಯಲ್ಲಿದ್ದರು. ಭಾರತವನ್ನು ಎಲ್ಲ ವಿಚಾರಧಾರೆಗಳಾಗಿ ಗ್ರಹಿಸುವ ಶಕ್ತಿ ನೆಹರೂ ಅವರಿಗೆ ಇತ್ತು ಎಂಬುದು ಗಾಂಧಿಯ ಅಭಿಪ್ರಾಯ ಆಗಿತ್ತು ಎಂದರು.

ಭಾರತದ ಪ್ರಜಾಪ್ರಭುತ್ವಕ್ಕೆ ಇಂದು ಬಹಳ ದೊಡ್ಡ ಕುತ್ತು ಹಾಗೂ ಅಪಾಯ ಬಂದೊದಗಿದೆ ಎಂಬುದಾಗಿ ಜಗತ್ತಿನಲ್ಲಿ ಅಧ್ಯಯನ ಸಂಸ್ಥೆಗಳು ಬೊಟ್ಟು ಮಾಡಿ ತೋರಿಸುತ್ತಿದೆ. ಈ ದೇಶ ಸರ್ವಾಧಿಕಾರದತ್ತ ಹೋಗುತ್ತಿರುವ ಸೂಚನೆಗಳನ್ನು ಅಧ್ಯಯನಕಾರರು ನಮ್ಮ ಮುಂದೆ ಇಡುತ್ತಿದ್ದಾರೆ.

ದೇಶವನ್ನು ಕಟ್ಟಿದ ಪ್ರಧಾನಿ ನೆಹರೂ ಅವರನ್ನೇ ಇಂದು ಜರೆಯುವಂತಹ ವ್ಯಂಗ್ಯದ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ನೆಹರೂ ಬಗ್ಗೆ ಟೀಕೆ ಮಾಡುವವರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ ಮತ್ತು ದೇಶವನ್ನೂ ಕಟ್ಟಿದವರಲ್ಲ ಎಂದು ಅವರು ಹೇಳಿದರು.

ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಇತ್ತೀಚೆಗೆ ಅಗಲಿದ ವಿಮರ್ಶಕ,ಭಾಷಾ ತಜ್ಞ ಡಾ.ಕೆ.ವಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ ಯನ್ನು ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ಅರ್ಪಿಸಿದರು.

ನಂತರ ಜರಗಿದ ಸಂವಾದದಲ್ಲಿ ಪ್ರೊ. ರಾಜಾರಾಮ್ ತೋಳ್ಪಾಡಿ ಮತ್ತು ಪ್ರೊ.ಕೆ. ಫಣಿರಾಜ್ ಭಾಗವಹಿಸಿದರು.

ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿ ಕಾರ್ಯಕಾರಿ ಸಮಿತಿ ಸದಸ್ಯ ಮೈಕಲ್ ಡಿಸೋಜ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now