
ಕಾರವಾರ: ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಉಂಟಾಗಿರುವ ಕಡಲಕೊರೆತ ಸಮಸ್ಯೆಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಕೈಗೊಳ್ಳುವುದು ಅತ್ಯಂತ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಗುರುವಾರ ಹಾರವಾಡದ ಕಡಲಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ಕಡಲಕೊರೆತದಿಂದ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ವಾಸ್ತವ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಡಲಕೊರೆತ ತಡೆಗಟ್ಟಲು ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳು ಹಾಗೂ ಕೃಷಿ ಭೂಮಿ ಸಮುದ್ರ ಪಾಲಾಗುವ ಅಪಾಯವಿದ್ದು, ಕರಾವಳಿ ಭಾಗದ ಜನರ ಜೀವ ಮತ್ತು ಆಸ್ತಿಯ ರಕ್ಷಣೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈ ವೇಳೆ ಸ್ಥಳೀಯರು ತಮ್ಮ ಅಳಲನ್ನು ಸಚಿವರ ಮುಂದೆ ತೋಡಿಕೊಂಡು, ಈ ವರ್ಷ ಮಳೆ, ಗಾಳಿ ಹಾಗೂ ಸಮುದ್ರದ ಅಲೆಗಳ ತೀವ್ರತೆ ಕಳೆದ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಿದ್ದರೂ ಕಡಲಕೊರೆತ ಉಂಟಾಗಿದೆ ಎಂದು ತಿಳಿಸಿದರು. ಸಮುದ್ರ ತೀರದ ಹಲವು ಮನೆಗಳು ಅಪಾಯದ ಅಂಚಿನಲ್ಲಿದ್ದು, ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮಗಳು ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶೀಲನೆ ವೇಳೆ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೆ. ಸೈಲ್, ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ. ನಾಯ್ಕ್, ಯಲ್ಲಾಪುರ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್, ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now