
ಶಿರ್ವ: ಗೂಗಲ್ ಪೇ ಮೂಲಕ ಹಣ ಜಮೆಯಾಗಿರುವುದಾಗಿ ನಕಲಿ ಸಂದೇಶ ಕಳುಹಿಸಿ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಒಟ್ಟು ₹2,49,299.73 ಹಣವನ್ನು ಅಪರಿಚಿತರು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾಪು ತಾಲೂಕು ಕಳತ್ತೂರು ಗ್ರಾಮದ ಬರಬೆಟ್ಟು ಹೊಸಮನೆ ನಿವಾಸಿ ವಾಸು ಶೆಟ್ಟಿ (57) ವಂಚನೆಗೊಳಗಾದವರು. ಇವರು ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ತಮ್ಮ ಹೆಸರಿನಲ್ಲಿ ಚಾಲ್ತಿ ಖಾತೆಯನ್ನು ಹೊಂದಿದ್ದು, ಅದನ್ನು ಮೊಬೈಲ್ ಸಂಖ್ಯೆಯ ಮೂಲಕ ಗೂಗಲ್ ಪೇಗೆ ಲಿಂಕ್ ಮಾಡಿಕೊಂಡು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು.
ದಿನಾಂಕ 09-10-2026ರಂದು ಸಂಜೆ ಸುಮಾರು 5:38ರ ವೇಳೆಗೆ ಮನೆಯಲ್ಲಿದ್ದಾಗ, ಇವರ ಗೂಗಲ್ ಪೇ ಖಾತೆಗೆ ಹಣ ಜಮೆಯಾಗಿದೆ ಎಂಬ ಸಂದೇಶ ಬಂದಿತ್ತು. ಸಂದೇಶವನ್ನು ಪರಿಶೀಲಿಸಿದಾಗ ‘GROWW VERIFICATION’ ಎಂಬ ಹೆಸರಿನಲ್ಲಿ ₹0.01 ಜಮೆಯಾಗಿರುವುದು ಕಂಡುಬಂದಿತ್ತು. ಬಳಿಕ ಸಂಜೆ 6:40ರ ಸುಮಾರಿಗೆ ‘Your channel limit has been modified successfully and will be effective from 09/10/2026’ ಎಂಬ ಮತ್ತೊಂದು ಸಂದೇಶ ಬಂದಿತ್ತು.
ಇದರ ಬೆನ್ನಲ್ಲೇ ವಾಸು ಶೆಟ್ಟಿಯವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹1,25,091.15, ₹45,926.69, ₹40,966.82, ₹26,139.77 ಹಾಗೂ ₹6,175.30 ಸೇರಿದಂತೆ ಒಟ್ಟು ₹2,49,299.73 ಹಣ ಕಡಿತಗೊಂಡಿದೆ.
ಅಪರಿಚಿತರು ಗೂಗಲ್ ಪೇಗೆ ಹಣ ಜಮೆಯಾಗಿರುವಂತೆ ನಕಲಿ ಸಂದೇಶ ಕಳುಹಿಸಿ, ಪಿರ್ಯಾದಿದಾರರಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now