ಗೋವಾ–ಕಾರವಾರ ಗಾಂಜಾ ಜಾಲ ಭೇದಿಸಿದ ಪೊಲೀಸರು; ಮೂವರು ಮಹಿಳೆಯರು ಸೇರಿ ಐವರು ವಶಕ್ಕೆ

ಗೋವಾ–ಕಾರವಾರ ಗಾಂಜಾ ಜಾಲ ಭೇದಿಸಿದ ಪೊಲೀಸರು; ಮೂವರು ಮಹಿಳೆಯರು ಸೇರಿ ಐವರು ವಶಕ್ಕೆ
0Shares

ಕಾರವಾರ: ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದು, ಗೋವಾ ಹಾಗೂ ಕಾರವಾರದಲ್ಲಿ ನಡೆಸಿದ ಎರಡು ಹಂತದ ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ, 1.311 ಕೆ.ಜಿ. ಗಾಂಜಾ, ನಗದು, ಬೈಕ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಜುಲೈ 27ರಂದು ಕಾರವಾರ ತಾಲೂಕಿನ ಬಿಣಗಾ ರಾಮನಗರದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಗಾಂಜಾ ಹೊಂದಿದ್ದ ಆರೋಪದ ಮೇರೆಗೆ ನಾಗರಾಜ ಹಡಪದ ಹಾಗೂ ವಿನೋದ್ ಕುಮಾರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ಅವರಿಂದ 465 ಗ್ರಾಂ ಗಾಂಜಾ (ಅಂದಾಜು ₹25,000 ಮೌಲ್ಯ), ಒಂದು ರಿಯಲ್‌ಮಿ ಮೊಬೈಲ್, ಕೆಎ-30/ಡಬ್ಲ್ಯೂ-2276 ನೋಂದಣಿಯ ಬಜಾಜ್ ಪಲ್ಸರ್ ಬೈಕ್ ಹಾಗೂ ₹250 ನಗದು ಜಪ್ತಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.

ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ವೇಳೆ ಆರೋಪಿಗಳು ಗೋವಾ ರಾಜ್ಯದ ಕಾಣಕೋಣ ತಾಲೂಕಿನ ಕೊಳಮ್ ಪ್ರದೇಶದಿಂದ ಗಾಂಜಾ ತಂದು ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಲ್ಲಿದ್ದ ಮೂವರು ಮಹಿಳಾ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 846 ಗ್ರಾಂ ಗಾಂಜಾ (ಅಂದಾಜು ₹48,000 ಮೌಲ್ಯ), ₹10,800 ನಗದು, ಡಿಜಿಟಲ್ ವೇಯಿಂಗ್ ಮಷೀನ್ ಹಾಗೂ ಪ್ಲಾಸ್ಟಿಕ್ ಟಬ್ ಜಪ್ತಿ ಮಾಡಿದ್ದಾರೆ.

ಒಟ್ಟಾರೆ ಕಾರ್ಯಾಚರಣೆಯಲ್ಲಿ 1 ಕೆ.ಜಿ. 311 ಗ್ರಾಂ ಗಾಂಜಾ, ₹11,050 ನಗದು, ಒಂದು ಬೈಕ್, ಒಂದು ಮೊಬೈಲ್ ಫೋನ್, ಡಿಜಿಟಲ್ ವೇಯಿಂಗ್ ಮಷೀನ್ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಗಾಂಜಾ ಜಾಲದ ಇನ್ನಷ್ಟು ಕೊಂಡಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಎಸ್.ವಿ. ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಯು.ಹೆಚ್. ಸಾತೇನಹಳ್ಳಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪನಿರೀಕ್ಷಕರಾದ ನೇಹಾಲ್ ಖಾನ್ ಮತ್ತು ಪ್ರಮೀಲಾ ವೈ. ನಾಯ್ಕ ಸೇರಿದಂತೆ ಠಾಣೆಯ ಸಿಬ್ಬಂದಿ ನಡೆಸಿದ್ದಾರೆ. ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now