ಬಂಟ್ವಾಳ: ತಲವಾರು ತೋರಿಸಿ ₹8.35 ಲಕ್ಷ ದರೋಡೆ ಪ್ರಕರಣ: ಮೂವರು ಅಂದರ್, ₹2.01 ಲಕ್ಷ ವಶ

ಬಂಟ್ವಾಳ: ತಲವಾರು ತೋರಿಸಿ ₹8.35 ಲಕ್ಷ ದರೋಡೆ ಪ್ರಕರಣ: ಮೂವರು ಅಂದರ್, ₹2.01 ಲಕ್ಷ ವಶ
0Shares

ಬಂಟ್ವಾಳ: ಸಿಮೆಂಟ್‌ ಹಾಗೂ ಕಬ್ಬಿಣದ ವ್ಯಾಪಾರ ಸಂಸ್ಥೆಯೊಂದರ ಹಣ ಸಂಗ್ರಹಿಸಿ ಬರುತ್ತಿದ್ದ ಉದ್ಯೋಗಿಗೆ ತಲವಾರು ತೋರಿಸಿ ಬೆದರಿಸಿ ₹8.35 ಲಕ್ಷ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಕಣ್ಣೂರಿನ ಸಿಮೆಂಟ್ ಮತ್ತು ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಅವರು, ಸಂಸ್ಥೆಯ ವ್ಯವಹಾರದ ಹಣ ಸಂಗ್ರಹಿಸುವ ಸಲುವಾಗಿ 2026ರ ಆ.20ರಂದು ವಿವಿಧ ಅಂಗಡಿಗಳಿಗೆ ತೆರಳಿದ್ದರು. ಅಂಗಡಿಗಳಿಂದ ಹಣ ಸಂಗ್ರಹಿಸಿ ಬಂಟ್ವಾಳದ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ತಲವಾರು ತೋರಿಸಿ ಬೆದರಿಸಿ ಅವರ ಬಳಿಯಿದ್ದ ₹8,35,000 ನಗದನ್ನು ದರೋಡೆಗೈದು ಪರಾರಿಯಾಗಿದ್ದರು.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಮಂಗಳೂರು ಶಕ್ತಿನಗರದ ಪ್ರವಿತ್‌ ಶೆಟ್ಟಿ, ಉಳ್ಳಾಲ ಕೋಡಿಯ ಉಮ್ಮರ್ ಫಾರೂಕ್ ಮತ್ತು ಉಳ್ಳಾಲ ಹರೇಕಳದ ಶಾಕೀರ್ ಎಂಬವರನ್ನು ನ.11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಂತರ ಆರೋಪಿಗಳನ್ನು ನ. 16ರವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಅವರಿಂದ ₹2,01,000 ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ ಕೂಡ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಕಾರ್ಯಾಚರಣೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಅವರ ನೇತೃತ್ವದ ತಂಡ ನಡೆಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now