ಉಡುಪಿ | ಕಾಪು ಯಾರ್ಡ್ ಬೀಚ್‌ನಲ್ಲಿ 5.710 ಕೆ.ಜಿ. ಗಾಂಜಾ ವಶಕ್ಕೆ: ಇಬ್ಬರ ಬಂಧನ

ಉಡುಪಿ | ಕಾಪು ಯಾರ್ಡ್ ಬೀಚ್‌ನಲ್ಲಿ 5.710 ಕೆ.ಜಿ. ಗಾಂಜಾ ವಶಕ್ಕೆ: ಇಬ್ಬರ ಬಂಧನ
0Shares

ಕಾಪು ಹಾಗೂ ಮಟ್ಟು ಬೀಚ್‌ಗಳಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದು, ಅವರಿಂದ 5.710 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ವಿನಯನಗರದ ಬದ್ರಿಯಾ ಮಸೀದಿ ಸಮೀಪದ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ, ಕೆಮ್ಮಣ್ಣು ಜಾಮೀಯ ಮಸೀದಿ ಸಮೀಪದ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ.

. 27ರಂದು ಬೆಳಿಗ್ಗೆ 11 ಗಂಟೆಗೆ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ, ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಅದರಂತೆ, ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ಅವರ ನೇತೃತ್ವದ ತಂಡ ಮಧ್ಯಾಹ್ನ 12.05ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿತು.

ಈ ವೇಳೆ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಹೊಂದಿರುವುದು ಪತ್ತೆಯಾಗಿದೆ. ಅವರಿಂದ ₹2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾ, ₹225 ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಇಬ್ಬರನ್ನೂ ಬಂಧಿಸಲಾಯಿತು.

ವಿಚಾರಣೆ ವೇಳೆ ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಈ ಹಿಂದೆಯೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026ರ ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(c), 20(b)(ii)(B)ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಕಳ ಉಪವಿಭಾಗದ ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ತೇಜಸ್ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಯಲ್ಲಿ ಕಾಪು ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ಗಳಾದ ವಿಕ್ರಮ್ ಬಿ., ಭಾಸ್ಕರ ಆರ್.ಸಿ., ಧರ್ಮಪ್ಪ, ರಘು, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಅನ್ವರ್ ಆಲಿ, ಸ್ವಾಮಿ ಡಿ.ಎಸ್., ಅಕಿಲ್, ಲೋಕೇಶ್ ಹಾಗೂ ಕಾರ್ಕಳ ಉಪವಿಭಾಗದ ಆ್ಯಂಟಿ ಎನ್‌ಡಿಪಿಎಸ್ ದಳದ ಹೆಡ್‌ಕಾನ್‌ಸ್ಟೆಬಲ್‌ಗಳಾದ ಜೀವನ್, ಸತೀಶ್, ಕೃಷ್ಣ ಪ್ರಸಾದ್, ಶಿವಾನಂದ ಪೂಜಾರಿ, ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ಸೋಕೋ ಅಧಿಕಾರಿಗಳು ತನಿಖೆಗೆ ಸಹಕರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now