
ಮೊಂತಿ ಹಬ್ಬ: ಮೇರಿ ಮಾತೆಯ ಜನ್ಮದೊಂದಿಗೆ ಕುಟುಂಬ, ನಂಬಿಕೆ ಮತ್ತು ಸೃಷ್ಟಿಯ ನವೀಕರಣ – ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜಾ
ಉಡುಪಿ: ಸೆಪ್ಟೆಂಬರ್ 8ರಂದು ವಿಶ್ವದಾದ್ಯಂತ ಕ್ರೈಸ್ತ ಸಮುದಾಯವು ಪವಿತ್ರ ಕನ್ಯಾಮರಿಯಮ್ಮನ ಜನ್ಮದ ಹಬ್ಬವನ್ನು ಭಕ್ತಿಭಾವದಿಂದ ಆಚರಿಸುತ್ತದೆ. ಕರಾವಳಿ ಕರ್ನಾಟಕದ ಕ್ರೈಸ್ತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಈ ಹಬ್ಬವು ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಪ್ರೀತಿಯಿಂದ “ಮೊಂತಿ ಹಬ್ಬ” ಎಂದು ಕರೆಯಲ್ಪಡುತ್ತದೆ. ಮರಿಯಮ್ಮನ ಜನ್ಮವನ್ನು ಸ್ಮರಿಸುವ ಈ ಹಬ್ಬವು ದೇವರ ಕೃಪೆಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಕುಟುಂಬದ ಏಕತೆ, ಹೆಣ್ಣುಮಗುವಿನ ಘನತೆ, ಹೊಸ ಬೆಳೆಯ ಕೃತಜ್ಞತೆ ಮತ್ತು ಸೃಷ್ಟಿಯ ಸಂರಕ್ಷಣೆಯ ಮೌಲ್ಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಮರಿಯಮ್ಮನ ಜನ್ಮವು ದೇವರ ರಕ್ಷಣಾ ಯೋಜನೆಯ ಮಹತ್ವದ ಅಧ್ಯಾಯಕ್ಕೆ ಮುನ್ನುಡಿಯಾಯಿತು. ದೇವರ ತಾಯಿಯಾಗುವ ವಿಶಿಷ್ಟ ಕರೆಯನ್ನು ಸ್ವೀಕರಿಸಿದ ಮರಿಯಮ್ಮ, ಮೊದಲಿಗೆ ದೇವಭಕ್ತಿಯುಳ್ಳ ಸರಳ ಕುಟುಂಬದಲ್ಲಿ ಬೆಳೆದ ಬಾಲಕಿಯಾಗಿದ್ದರು. ಅವರ ಜೀವನವು ನಂಬಿಕೆ, ವಿನಯ, ಪಾವಿತ್ರ್ಯ, ವಿಧೇಯತೆ ಮತ್ತು ದೇವರ ಚಿತ್ತಕ್ಕೆ ಸಂಪೂರ್ಣ ಸಮರ್ಪಣೆಯ ಮಾದರಿಯಾಗಿದೆ. ಆದ್ದರಿಂದ ಮರಿಯಮ್ಮನ ಜನ್ಮಹಬ್ಬವನ್ನು ಆಚರಿಸುವಾಗ, ಪ್ರತಿಯೊಂದು ಮಗುವೂ ದೇವರ ಅಮೂಲ್ಯ ಕೊಡುಗೆ ಎಂಬ ಸತ್ಯವನ್ನು ನಾವು ಹೃದಯದಲ್ಲಿ ಅಚ್ಚೊತ್ತಿಕೊಳ್ಳಬೇಕು.
ವಿಶೇಷವಾಗಿ ಹೆಣ್ಣುಮಗುವಿನ ಘನತೆ ಮತ್ತು ಗೌರವದ ಕುರಿತು ಈ ಹಬ್ಬವು ನಮಗೆ ಆಳವಾದ ಸಂದೇಶ ನೀಡುತ್ತದೆ. ಪ್ರತಿಯೊಂದು ಹೆಣ್ಣುಮಗುವಿಗೂ ಪ್ರೀತಿ, ಸುರಕ್ಷತೆ, ಉತ್ತಮ ಶಿಕ್ಷಣ, ಸಮಾನ ಅವಕಾಶ ಮತ್ತು ಗೌರವ ದೊರಕುವುದು ಕುಟುಂಬದಷ್ಟೇ ಅಲ್ಲ, ಇಡೀ ಸಮಾಜದ ಜವಾಬ್ದಾರಿಯಾಗಿದೆ. ಹೆಣ್ಣುಮಗುವನ್ನು ಗೌರವಿಸುವುದು ಮಾನವ ಘನತೆಯನ್ನು ಗೌರವಿಸುವುದಾಗಿದೆ. ಮರಿಯಮ್ಮನ ಜೀವನವು ಹೆಣ್ಣುಮಕ್ಕಳು ಕುಟುಂಬ ಮತ್ತು ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು ಎಂಬುದಕ್ಕೆ ಶ್ರೇಷ್ಠ ಸಾಕ್ಷಿ. ಆದ್ದರಿಂದ ಮೊಂತಿ ಹಬ್ಬವು ಹೆಣ್ಣುಮಕ್ಕಳನ್ನು ಗೌರವಿಸುವ ಮತ್ತು ಅವರ ಭವಿಷ್ಯವನ್ನು ಕಾಪಾಡುವ ಸಂಕಲ್ಪದ ದಿನವೂ ಆಗಿದೆ.
ಮೊಂತಿ ಹಬ್ಬವು ಮೂಲತಃ ಕುಟುಂಬದ ಹಬ್ಬವಾಗಿದೆ. ಕುಟುಂಬದ ಸದಸ್ಯರು ಒಂದಾಗಿ ಸೇರಿ ಪ್ರಾರ್ಥಿಸುವುದು, ಹಿರಿಯರ ಆಶೀರ್ವಾದ ಪಡೆಯುವುದು, ಮಕ್ಕಳೊಂದಿಗೆ ಸಂತೋಷ ಹಂಚಿಕೊಳ್ಳುವುದು ಮತ್ತು ಒಂದೇ ಮೇಜಿನ ಸುತ್ತ ಕುಳಿತು ಊಟ ಮಾಡುವುದು ಈ ಹಬ್ಬದ ಅರ್ಥಪೂರ್ಣ ಪರಂಪರೆ. ಆಧುನಿಕ ಜೀವನದ ವೇಗದಲ್ಲಿ ಕುಟುಂಬದ ಸದಸ್ಯರಿಗೆ ಪರಸ್ಪರ ಸಮಯ ನೀಡುವುದು, ಮಾತುಕತೆ ನಡೆಸುವುದು ಮತ್ತು ಒಟ್ಟಾಗಿ ಪ್ರಾರ್ಥಿಸುವುದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಮೊಂತಿ ಹಬ್ಬವು ಕುಟುಂಬದ ನಿಜವಾದ ಅರ್ಥವನ್ನು ಪುನಃ ನೆನಪಿಸುತ್ತದೆ. ಕುಟುಂಬವೆಂದರೆ ಕೇವಲ ಒಂದೇ ಸೂರಿನಡಿ ವಾಸಿಸುವವರ ಸಮೂಹವಲ್ಲ; ಪರಸ್ಪರ ಪ್ರೀತಿ, ಗೌರವ, ಕ್ಷಮೆ, ತ್ಯಾಗ, ಪ್ರಾರ್ಥನೆ ಮತ್ತು ಹಂಚಿಕೆಯ ಮೂಲಕ ಒಂದಾಗಿರುವ ಜೀವಂತ ಸಮುದಾಯ. ಇಂದಿನ ಸಮಾಜದಲ್ಲಿ ಒಂಟಿತನ, ತಲೆಮಾರುಗಳ ನಡುವಿನ ಅಂತರ, ಸಂಬಂಧಗಳಲ್ಲಿನ ಬಿರುಕು ಮತ್ತು ಮೌಲ್ಯಗಳ ಕ್ಷೀಣತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮರಿಯಮ್ಮನ ಕುಟುಂಬ ನಮಗೆ ಒಂದು ಸುಂದರ ಮಾದರಿಯನ್ನು ನೀಡುತ್ತದೆ. ದೇವರ ಮೇಲಿನ ನಂಬಿಕೆ, ಪರಸ್ಪರ ಪ್ರೀತಿ, ತ್ಯಾಗ ಮತ್ತು ಸೇವೆಗಳ ಮೇಲೆ ನಿರ್ಮಿತವಾದ ಕುಟುಂಬವೇ ಸಮಾಜದ ನಿಜವಾದ ಬಲವಾಗಿದೆ.
ಮೊಂತಿ ಹಬ್ಬದ ಮತ್ತೊಂದು ವಿಶಿಷ್ಟ ಅಂಶವೆಂದರೆ ಹೊಸ ಬೆಳೆ. ಪ್ರಕೃತಿಯ ಮೊದಲ ಫಲಗಳನ್ನು ದೇವರಿಗೆ ಕೃತಜ್ಞತೆಯಿಂದ ಅರ್ಪಿಸಿ, ನಂತರ ಕುಟುಂಬದ ಎಲ್ಲರೂ ಸೇರಿ ಹಂಚಿಕೊಂಡು ಸೇವಿಸುವ ಸಂಪ್ರದಾಯವು ನಮ್ಮ ಜೀವನದ ಪ್ರತಿಯೊಂದು ಆಶೀರ್ವಾದವೂ ದೇವರ ವರವಾಗಿದೆ ಎಂಬ ಅರಿವನ್ನು ಮೂಡಿಸುತ್ತದೆ. ಹೊಸ ಬೆಳೆಯ ಹಂಚಿಕೆಯು ಕೇವಲ ಆಹಾರ ಹಂಚಿಕೊಳ್ಳುವ ಕ್ರಿಯೆಯಲ್ಲ; ಅದು ಕೃತಜ್ಞತೆ, ಸಹಭಾಗಿತ್ವ, ಸಹೋದರತ್ವ ಮತ್ತು ಸಹಬಾಳ್ವೆಯ ಸಂಕೇತವಾಗಿದೆ ಸಂಕೇತವಾಗಿದೆ.
ಹೊಸ ಬೆಳೆಯ ಹಬ್ಬವಾದ ಮೊಂತಿ ಹಬ್ಬವು ಸೃಷ್ಟಿಯ ಸಂರಕ್ಷಣೆಯ ಜವಾಬ್ದಾರಿಯನ್ನೂ ನಮಗೆ ನೆನಪಿಸುತ್ತದೆ. ಭೂಮಿ, ನೀರು, ಗಾಳಿ, ಮಣ್ಣು, ಸಸ್ಯಗಳು ಮತ್ತು ಜೀವಜಲ— ಇವು ದೇವರು ನಮಗೆ ವಹಿಸಿರುವ ಅಮೂಲ್ಯ ಕೊಡುಗೆಗಳು. ಅವುಗಳನ್ನು ದುರುಪಯೋಗಪಡಿಸಿಕೊಳ್ಳದೆ, ಮುಂದಿನ ಪೀಳಿಗೆಗಳಿಗಾಗಿ ಸಂರಕ್ಷಿಸುವುದು ನಮ್ಮ ನೈತಿಕ ಕರ್ತವ್ಯ. ಈ ಹಬ್ಬದ ಸಂದರ್ಭದಲ್ಲಿ ಮರಗಳನ್ನು ಬೆಳೆಸುವುದು, ನೀರನ್ನು ಉಳಿಸುವುದು, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಪ್ರಕೃತಿಯೊಂದಿಗೆ ಸಮತೋಲನದ ಜೀವನ ನಡೆಸುವ ಸಂಕಲ್ಪವನ್ನು ಕೈಗೊಳ್ಳೋಣ.
ಈ ಪವಿತ್ರ ಮೊಂತಿ ಹಬ್ಬದ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕನ್ಯಾಮರಿಯಮ್ಮನ ಮಧ್ಯಸ್ಥಿಕೆಯಿಂದ ನಮ್ಮ ಕುಟುಂಬಗಳಲ್ಲಿ ಶಾಂತಿ, ಪ್ರೀತಿ ಮತ್ತು ಏಕತೆ ನೆಲೆಸಲಿ. ಪ್ರತಿಯೊಂದು ಹೆಣ್ಣುಮಗುವೂ ದೇವರ ಅಮೂಲ್ಯ ವರವೆಂದು ಗೌರವಿಸಲ್ಪಡಲಿ. ನಮ್ಮ ಹೊಲಗಳು ಸಮೃದ್ಧಿಯಾಗಲಿ, ನಮ್ಮ ಪರಿಸರ ಹಸಿರಿನಿಂದ ಕಂಗೊಳಿಸಲಿ. ನಮ್ಮ ಹೃದಯಗಳು ದೇವರ ಅನುಗ್ರಹಕ್ಕಾಗಿ ಸದಾ ಕೃತಜ್ಞತೆಯಿಂದ ತುಂಬಿರಲಿ.
ಮರಿಯಮ್ಮನ ಜನ್ಮಹಬ್ಬವು ಪ್ರತಿಯೊಂದು ಮನೆಗೂ ಆಶೆಯ ಬೆಳಕನ್ನು, ಪ್ರತಿಯೊಂದು ಕುಟುಂಬಕ್ಕೂ ಪ್ರೀತಿಯ ಸಂಕೇತ ವನ್ನು ಮತ್ತು ಇಡೀ ಸೃಷ್ಟಿಗೂ ಸಂರಕ್ಷಣೆಯ ಹೊಸ ಸಂಕಲ್ಪವನ್ನು ತರಲಿ.
ಮೊಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
✠ ಅತೀ ವಂದನೀಯ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ
ಧರ್ಮಾಧ್ಯಕ್ಷರು, ಉಡುಪಿ ಧರ್ಮ ಕ್ಷೇತ್ರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now