ಚಿನ್ನ ಕದ್ದು ಥಾರ್ ಖರೀದಿ: ಯುವಕನ ಬಂಧನ

ಚಿನ್ನ ಕದ್ದು ಥಾರ್ ಖರೀದಿ: ಯುವಕನ ಬಂಧನ
0Shares

ಕೊಲ್ಹಾಪುರ: ಐಷಾರಾಮಿ ಕಾರು ಖರೀದಿಸುವ ಆಸೆಗೆ ಸ್ವಂತ ಮಾವನ ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ಕದ್ದ ಯುವಕನೊಬ್ಬ, ಅದೇ ಮಾವನನ್ನು ಹೊಸ ಕಾರಿನ ಪೂಜೆಗೆ ಆಹ್ವಾನಿಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾತವೇ ಗ್ರಾಮದಲ್ಲಿ ಈ ಘಟನೆ ನಡೆದಿದೆ.

19 ವರ್ಷದ ಸಮರ್ ಚವಾಣ್ ಎಂಬಾತ ತನ್ನ ಮಾವ ಉಮೇಶ್ ಮಾರುತಿ ಚವಾಣ್ ಅವರ ಮನೆಯಿಂದ ಸುಮಾರು 15 ಪವನ್ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಚಿನ್ನಾಭರಣಗಳನ್ನು ಸ್ಥಳೀಯ ಚಿನ್ನದ ವ್ಯಾಪಾರಿಗೆ ಸುಮಾರು ₹10 ಲಕ್ಷಕ್ಕೆ ಮಾರಾಟ ಮಾಡಿ, ಆ ಹಣದಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‌ಯುವಿ ಖರೀದಿಸಿದ್ದಾನೆ ಎನ್ನಲಾಗಿದೆ.

ಹೊಸ ಥಾರ್ ಕಾರು ಮನೆಗೆ ಬಂದ ಬಳಿಕ ಸಮರ್, ತನ್ನ ಮಾವ ಉಮೇಶ್ ಅವರನ್ನು ವಾಹನದ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾನೆ. ಪೂಜೆಗೆ ಧರಿಸಲು ತಮ್ಮ ಚಿನ್ನಾಭರಣಗಳನ್ನು ಹುಡುಕಿದಾಗ ಅವು ನಾಪತ್ತೆಯಾಗಿರುವುದು ಉಮೇಶ್ ಅವರಿಗೆ ಗೊತ್ತಾಗಿದೆ.

ಉಮೇಶ್ ಮತ್ತು ಅವರ ಪತ್ನಿಗೆ ಸೇರಿದ ಆಭರಣಗಳು ಮಾತ್ರ ಕಾಣೆಯಾಗಿದ್ದು, ಸಮೀಪದಲ್ಲೇ ಇಡಲಾಗಿದ್ದ ಅಜ್ಜಿಯ ಚಿನ್ನಾಭರಣಗಳು ಹಾಗೆಯೇ ಉಳಿದಿದ್ದವು. ಇದರಿಂದ ಕುಟುಂಬದವರಿಗೆ ಪರಿಚಯಸ್ಥರೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ಮೂಡಿದೆ.

ಚಿನ್ನಾಭರಣ ನಾಪತ್ತೆಯಾದ ಕುರಿತು ಉಮೇಶ್ ಅವರು ಕೊಡೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಸಮರ್ ಇತ್ತೀಚೆಗೆ ದುಬಾರಿ ಕಾರು ಖರೀದಿಸಿರುವುದು ಹಾಗೂ ಅದಕ್ಕೆ ಹಣ ಹೊಂದಿಸಿದ ರೀತಿಯ ಬಗ್ಗೆ ಮಾಹಿತಿ ಸಿಕ್ಕಿದೆ.

ಇದರ ಆಧಾರದಲ್ಲಿ ವಿಚಾರಣೆ ಮುಂದುವರಿಸಿದಾಗ ಸಮರ್ ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸಮರ್ ಚವಾಣ್ ಮತ್ತು ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದಿದ್ದಾರೆ. ಕದ್ದ ಚಿನ್ನಾಭರಣಗಳ ಮಾರಾಟ ಹಾಗೂ ಹಣದ ವಹಿವಾಟಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now