
ಉಡುಪಿ, ಅಕ್ಟೋಬರ್ 25: ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ‘ನಡಿಗೆ – Your Donation Towards Thousand Steps’ ಪಾದರಕ್ಷೆ ದಾನ ಅಭಿಯಾನದಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ.ರೋಡ್ ಭಾಗವಹಿಸಿತು.
ಕ್ಲಬ್ ಕಾರ್ಯದರ್ಶಿ ಲ. ಪೆಲ್ವಿನ್ ಕ್ವಾಡ್ರಸ್, ಎಂ.ಜೆ.ಎಫ್. ಲ. ಫೆಲಿಕ್ಸ್ ಫೆರ್ನಾಂಡಿಸ್ ಹಾಗೂ ಲ. ಸ್ಟ್ಯಾನಿ ಕ್ವಾಡ್ರಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ಲಬ್ ಸದಸ್ಯರಿಂದ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸಂಗ್ರಹಿಸಿದ ಹಳೆಯ, ಮರುಬಳಕೆಗೆ ಯೋಗ್ಯವಾದ ಪಾದರಕ್ಷೆಗಳನ್ನು ದಾನವಾಗಿ ಹಸ್ತಾಂತರಿಸಿದರು.
‘ನಡಿಗೆ 2026’ ಅಭಿಯಾನವು ಅಕ್ಟೋಬರ್ 23ರಿಂದ 25ರವರೆಗೆ ಎಂಜಿಎಂ ಕಾಲೇಜಿನಲ್ಲಿ ಗ್ರೀನ್ಸೋಲ್ ಫೌಂಡೇಶನ್ ಮತ್ತು ಎಂಜಿಎಂ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ನಡೆಯಿತು. ಬಳಕೆಯಾಗದೆ ಉಳಿದಿರುವ ಪಾದರಕ್ಷೆಗಳನ್ನು ಸಂಗ್ರಹಿಸಿ, ಅವುಗಳನ್ನು ಮರುಸಂಸ್ಕರಿಸಿ ಅಗತ್ಯವಿರುವ ಮಕ್ಕಳಿಗೆ ವಿತರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಗ್ರೀನ್ಸೋಲ್ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಹಳೆಯ ಪಾದರಕ್ಷೆಗಳನ್ನು ಮರುಬಳಕೆಗೆ ಯೋಗ್ಯವಾಗುವಂತೆ ಸಂಸ್ಕರಿಸಿ ಅಗತ್ಯವಿರುವವರಿಗೆ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಪ್ರಯತ್ನವು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಬಡ ಮಕ್ಕಳಿಗೆ ಪಾದರಕ್ಷೆಗಳನ್ನು ಒದಗಿಸುವ ಸಾಮಾಜಿಕ ಕಳಕಳಿಯ ಕಾರ್ಯವಾಗಿದೆ.
ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ.ರೋಡ್ನ ಈ ಸೇವಾ ಕಾರ್ಯಕ್ಕೆ ಪಾದರಕ್ಷೆಗಳನ್ನು ದಾನವಾಗಿ ನೀಡಿ ಸಹಕರಿಸಿದ ಎಲ್ಲಾ ಸದಸ್ಯರು ಹಾಗೂ ದಾನಿಗಳಿಗೆ ಕ್ಲಬ್ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now