
ಶಿರಸಿ: ಹಿರಿಯ ನಾಗರಿಕರು ಹಾಗೂ ಎಂಡೋಸಲ್ಫಾನ್ ಬಾಧಿತ ವಿಶೇಷ ಚೇತನರ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ SCODWES ಸಂಸ್ಥೆಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ಪ್ರತಿಷ್ಠಿತ ಸಾಮಾಜಿಕ ಸೇವಾ ಶ್ರೇಷ್ಠತಾ ಪ್ರಶಸ್ತಿ–2026 ಪ್ರದಾನ ಮಾಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದ FKCCI Global CSR & Sustainability Summit–2026ರ ಅಂತರರಾಷ್ಟ್ರೀಯ ಮಟ್ಟದ ಸಮಾರಂಭದಲ್ಲಿ ಸಂಸ್ಥೆಯ ಪರವಾಗಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹಾಗೂ ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್. ರವಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಎಂಡೋಸಲ್ಫಾನ್ ಬಾಧಿತ ವಿಶೇಷ ಚೇತನರ ಸಬಲೀಕರಣಕ್ಕಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ‘ಆಶಾಕಿರಣ’ (Project Ashakirana) ಯೋಜನೆಯಡಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಜೀವನಮಟ್ಟ ಸುಧಾರಣೆ, ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಂಸ್ಥೆ ನೀಡುತ್ತಿರುವ ಕೊಡುಗೆಯನ್ನು FKCCI ಪ್ರಶಂಸಿಸಿದೆ.
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿವಿಧ ಪ್ರತಿಷ್ಠಿತ ಕಂಪನಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಮನ್ವಯಕ್ಕಾಗಿ FKCCI ಈ ಸಮಾವೇಶವನ್ನು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ SCODWES ಸಂಸ್ಥೆಯನ್ನು ವಿಶೇಷ ಆಹ್ವಾನಿತ ಸಂಸ್ಥೆಯಾಗಿ ಆಹ್ವಾನಿಸಲಾಗಿತ್ತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಶಸ್ತಿ ಪ್ರದಾನ ಮಾಡಿ ಸಂಸ್ಥೆಯ ಸಾಧನೆಯನ್ನು ಅಭಿನಂದಿಸಿದರು. ಸಮಾರಂಭದಲ್ಲಿ FKCCI ಅಧ್ಯಕ್ಷೆ ಶ್ರೀಮತಿ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, UN ಪ್ರತಿನಿಧಿ ಸ್ಟೀಫನ್ ಪ್ರೇಸನರ್, ಇಸ್ರೇಲ್ ಕಾನ್ಸುಲೇಟ್ ಜನರಲ್ ಪ್ರತಿನಿಧಿ ಓರ್ಲಿ ವೈಟ್ಸ್ಮನ್, UN Global Compact Network India ಕಾರ್ಯನಿರ್ವಾಹಕ ನಿರ್ದೇಶಕ ರತ್ನೇಶ್, ಲೂಥ್ರಾ ಗ್ರೂಪ್ನ ಅಧ್ಯಕ್ಷ ಗಿರೀಶ್ ಲೂಥ್ರಾ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ್ದ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಗೌರವವು ಸಂಸ್ಥೆಯ ಎಲ್ಲಾ ಫಲಾನುಭವಿಗಳು, ದಾನಿಗಳು, ಸಿಬ್ಬಂದಿ ಹಾಗೂ ಶುಭ ಹಾರೈಕೆದಾರರ ಸಹಕಾರಕ್ಕೆ ಸಂದ ಗೌರವವಾಗಿದೆ ಎಂದು SCODWES ತಿಳಿಸಿದೆ. ಈ ಪ್ರಶಸ್ತಿ ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಇನ್ನಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದ್ದು, “ಜನರಿಗೆ ತಮ್ಮನ್ನು ತಾವು ಸಬಲಗೊಳಿಸಿಕೊಳ್ಳಲು ನೆರವಾಗುವುದು ಹಾಗೂ ಸ್ವಾವಲಂಬಿ ಸಮುದಾಯಗಳನ್ನು ನಿರ್ಮಿಸುವುದು” ಎಂಬ ಸಂಸ್ಥೆಯ ಧ್ಯೇಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಸಂಸ್ಥೆ ಕೃತಜ್ಞತೆ ವ್ಯಕ್ತಪಡಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now