ಆನಂದ ಪೂಜಾರಿ (ಕುಂದಾಪುರ) ಅವರಿಗೆ ಅಮೇರಿಕಾದ ವಿವಿ ಯಿಂದ ಗೌರವ ಡಾಕ್ಟರೇಟ್

ಆನಂದ ಪೂಜಾರಿ (ಕುಂದಾಪುರ) ಅವರಿಗೆ ಅಮೇರಿಕಾದ ವಿವಿ ಯಿಂದ ಗೌರವ ಡಾಕ್ಟರೇಟ್

0Shares

ಮುಂಬಯಿ, ಮೇ.೦೮: ಕರ್ನಾಟಕ ಕರಾವಳಿಯ ಕುಂದಾಪುರ ಆಲೂರು ಇಲ್ಲಿನ ಆನಂದ ಪೂಜಾರಿ ಅವರು ಅಮೇರಿಕಾದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದು, ಯುಎಸ್‌ಎ ಅಲ್ಲಿನ ವಾಷಿಂಗ್ಟನ್ ಡೀಸಿ ಅಲ್ಲಿರುವ ಪ್ರತಿಷ್ಠಿತ ವಾಷಿಂಗ್ಟನ್ ಎಡ್ವೆಂನ್‌ಟಿಸ್ಟ್ ಯುನಿವರ್ಸಿಟಿ ಕಳೆದ ಭಾನುವಾರ (ಮೇ.೦೩) ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಭವ್ಯವಾಗಿ ನಡೆಸಿದ ವಾರ್ಷಿಕ ಘಟಿಕೋತ್ಸವ ಹಾಗೂ ಯುನಿವರ್ಸಿಟಿಯ ೧೧೧ನೇ ಪದವಿ ಪ್ರದಾನ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಾಧಕ ಆನಂದ ಪೂಜಾರಿ ಅವರಿಗೆ ‘ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್’ ಗೌರವ ಪದವಿ ನೀಡಿ ಗೌರವಿಸಲಾಯಿತು.

ಉಪಸ್ಥಿತ ಗ್ಲೋಬಲ್ ಅಲಯಂಟ್ ಇನ್‌ಕಾರ್ಪೋರೇಶನ್‌ನ ಸಿಇಓ ಮತ್ತು ಅಧ್ಯಕ್ಷ ರಾಜನ್ ನಟರಾಜನ್, “ಆನಂದ ಪೂಜಾರಿ ಅವರು ಈ ಮಹತ್ವದ ಡಾಕ್ಟರೇಟ್ ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ. ಇದು ಅವರ ಸಮರ್ಪಣೆ, ಬದ್ಧತೆ ಮತ್ತು ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ“ಎಂದರು

ಆನಂದ ಪೂಜಾರಿ ಗೌರವಕ್ಕೆ ಉತ್ತರವಾಗಿಸಿ “ನಿಮ್ಮೆದುರು ನಾನು ತೀರಾ ವಿನಮ್ರತೆ ಮತ್ತು ಕೃತಜ್ಞತಾಪೂರ್ವಕವಾಗಿ ನಿಂತಿರುವೆನು. ಈ ಡಾಕ್ಟರೇಟ್ ಪದವಿ ಅತ್ಯಂತ ಗೌರವ ಮತ್ತು ಹೆಮ್ಮೆಯದ್ದಾಗಿದೆ. ನಾನೇನು ಅನುಕೂಲಸ್ಥ ಪರಿವಾರದ ಹಿನ್ನೆಲೆಯಿಂದ ಬಂದವನಲ್ಲ. ನಾನು ಆರಂಭದಿಂದಲೂ ಪರಿಶ್ರಮ, ಶಿಸ್ತು ಮತ್ತು ನಂಬಿಕೆಯನ್ನು ಜೀವನ ಮೌಲ್ಯವಾಗಿರಿಸಿ ಕೊಂಡವನು. ಸಮಾಜದ ಬಗ್ಗೆ ಯಾವತ್ತೂ ನನಗೆ ಗೌರವವಿದೆ. ಮೌಲ್ಯಗಳು ನನ್ನ ಬದುಕಿನ ದೃಢವಾದ ತಳಗಟ್ಟಾಗಿ ಸಹಾಯ ಮಾಡಿವೆ. ಈ ಗೌರವ ಪದವಿಗೆ ನಾನೊಬ್ಬನೇ ಹಕ್ಕುದಾರನಲ್ಲ. ಇದಕ್ಕೆ ಸದಾ ಬೆಂಗಾವಲಾಗಿರುವ ಪತ್ನಿ ಸುಮಿತಾ, ಸುಪುತ್ರ ಆರ್ಯನ್ ಮತ್ತು ಇಬ್ಬರು ಸುಪುತ್ರಿಯರಾದ ಅನಿಶಾ ಮತ್ತು ತಾರಾ ಮತ್ತು ನನ್ನೆಲ್ಲಾ ಹಿತಚಿಂತಕರೂ ಪಾಲುದಾರರಾಗಿದ್ದಾರೆ. ವಾಷಿಂಗ್ಟನ್ ಎಡ್ವೆಂನ್‌ಟಿಸ್ಟ್ ಯುನಿವರ್ಸಿಟಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಸಮಾರಂಭದಲ್ಲಿ ೨೦೨೬ನೇ ಸಾಲಿನ ಪದವೀಧರ ವಿದ್ಯಾಥಿಗಳು ಪದವಿ ಸ್ವೀಕರಿಸಿ ಶೈಕ್ಷಣಿಕ ಸಾಧನೆಯನ್ನು ಸಂಭ್ರಮಿಸಿದರು. ಚೆರ್ಲಿಕಿ ಸುಂಝು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆನಂದ ಪೂಜಾರಿ ಕುಂದಾಪುರ:
ಅಮೇರಿಕಾದಲ್ಲಿರುವ ಭಾರತದ ರಾಯಬಾರಿ ಕಛೇರಿಗೆ ಕ್ಯಾಟರಿಂಗ್ ಸೇವೆಸಲ್ಲಿಸುವ ಆನಂದ ಪೂಜಾರಿ ಅವರ ರುಚಿಕರ ಆಹಾರಾತಿಥ್ಯಸೇವೆಗೆ ಭಾರತದ ಪ್ರಧಾನಮಂತ್ರಿಗಳಾದ ಮನಮೋಹನಸಿಂಗ್ ಮತ್ತು ನರೇಂದ್ರ ಮೋದಿ ಅವರು ಸಹ ಶ್ಲಾಘಿಸಿರುವುದನ್ನು ನೆನಪಿಸಿ ಕೊಳ್ಳಬಹುದು.

ಜುವೆಲ್ ಆಫ್ ಇಂಡಿಯಾ, ವುಡ್‌ಲ್ಯಾಂಡ್ಸ್, ಉಡುಪಿ ರೆಸ್ಟೋರೆಂಟ್, ಪೂಜಾರಿ ಕನ್ಸಲ್ಟನ್ಸಿ, ಜಿಡಿ ಹಾಸ್ಪಿಟಾಲಿಟಿ ಮುಂತಾದ ವಿವಿಧ ಉದ್ಯಮಗಳಲ್ಲಿ ತೊಡಗಿಸಿ ಕೊಂಡಿರುವ ಆನಂದ ಪೂಜಾರಿ ಅವರು ಮೂಲತ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಆಲೂರು ಎಂಬ ಪುಟ್ಟ ಗುಡ್ಡಗಾಡುಹಳ್ಳಿಯ ಕೃಷಿಕ ಪರಿವಾದವರು. ಆಲೂರು ಸರಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಮುಂಬೈಗೆ ಬಂದು ಹಗಲುಹೊತ್ತು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತ ರಾತ್ರಿ ಶಾಲೆ ಸೇರಿ ಪಿಯುಸಿ ಹಂತದವರೆಗೆ ಶಿಕ್ಷಣ ಮುಗಿಸಿರುವರು. ತದನಂತರ ಅವರ ಅಣ್ಣ ದಿ| ಮಂಜುನಾಥ ಪೂಜಾರಿ ಅವರ ಮುತುವರ್ಜಿಯಿಂದ ೧೯೯೫ರಲ್ಲಿ ಅಮೇರಿಕಾಕ್ಕೆ ಹೋಗಿ ಹೊಟೇಲು ಉದ್ಯೋಗದಲ್ಲಿ ತೊಡಗಿಸಿಕೊಂಡು ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಮೇಲೇರಿ ಸ್ವಂತ ಹೊಟೆಲು ಉದ್ಯಮ ಆರಂಭಿಸಿ ಜನಾನುರಾಗಿರುವರು.

ಅಮೇರಿಕೆಯಲ್ಲಿ ಅನೇಕ ಕನ್ನಡ ಸಾಂಸ್ಕೃತಿಕ ಸೇವಾಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಆನಂದ ಪೂಜಾರಿ ಇವರ ಪ್ರಾಮಾಣಿಕ, ಶಿಸ್ತುಬದ್ಧ, ಶ್ರಮ ಜೀವನ ಪಯಣಗಾಥೆ ರೋಚಕವಾಗಿದ್ದು ಸಮಾಜಕ್ಕೆ ಅತ್ಯಂತ ಸ್ಪೂರ್ತಿದಾಯಕವಾದುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now