ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ವಿಶ್ವ ಕೌಶಲ್ಯ ದಿನಾಚರಣೆ: ಕೃಷಿ ಉದ್ಯಮಿ ತರಬೇತಿಗೆ ಚಾಲನೆ, ಯಶಸ್ವಿ ಉದ್ಯಮಿಗಳಿಗೆ ಸನ್ಮಾನ

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ವಿಶ್ವ ಕೌಶಲ್ಯ ದಿನಾಚರಣೆ: ಕೃಷಿ ಉದ್ಯಮಿ ತರಬೇತಿಗೆ ಚಾಲನೆ, ಯಶಸ್ವಿ ಉದ್ಯಮಿಗಳಿಗೆ ಸನ್ಮಾನ
0Shares

ಬ್ರಹ್ಮಾವರ, ಜು. 15: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆ ಹಾಗೂ ಕೃಷಿ ಉದ್ಯಮಿ ತರಬೇತಿ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಶ್ರೀ ಹರೀಶ್ ಜಿ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರುಡ್‌ಸೆಟ್‌ನಲ್ಲಿ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಹರೀಶ್ ಜಿ., ಯುವಜನತೆಗೆ ಉದ್ಯೋಗ ಮತ್ತು ಸ್ವಾವಲಂಬಿ ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನು ತರಬೇತಿಯ ಮೂಲಕ ನೀಡುವುದು ವಿಶ್ವ ಕೌಶಲ್ಯ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಪ್ರತಿ ವರ್ಷ ಜುಲೈ 15ರಂದು ಆಚರಿಸುವ ಈ ದಿನವು ಯುವಕರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ದೇಶದಲ್ಲಿ ಬಡತನ ನಿರ್ಮೂಲನೆಗೆ ಆರ್ಥಿಕ ಸ್ವಾವಲಂಬನೆ ಅಗತ್ಯವಾಗಿದ್ದು, ಯುವಕರು ಉದ್ಯೋಗ ಅಥವಾ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರುಡ್‌ಸೆಟ್ ಸಂಸ್ಥೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ ಯುವಕರನ್ನು ಸ್ವ ಉದ್ಯೋಗದತ್ತ ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು. ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಕೈಜೋಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕೌಶಲ್ಯ ಅಡಗಿದ್ದು, ಅದನ್ನು ಗುರುತಿಸಿ ಸೂಕ್ತ ತರಬೇತಿ ಪಡೆದು ಉದ್ಯಮ ಆರಂಭಿಸಿದರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು. ಸನ್ಮಾನಿತ ಉದ್ಯಮಿಗಳು ಹಾಗೂ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್‌ನಲ್ಲಿ ತರಬೇತಿ ಪಡೆದು ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡ ಪೇತ್ರಿಯ ಜೆ & ಹೆಚ್ ಫಾರ್ಮ್‌ನ ಮಾಲಕರಾದ ಶ್ರೀ ಹರ್ಷ ಮತ್ತು ಶ್ರೀಮತಿ ಜಾಹ್ನವಿ, ಬಜಗೋಳಿಯ ಸಕಲಂ ಫುಡ್ ಪ್ರಾಡಕ್ಟ್ಸ್‌ನ ಮಾಲಕರಾದ ಶ್ರೀ ಪೂರ್ಣೇಶ್, ಉಪ್ಪೂರಿನ ವರ ಪ್ರಾಡಕ್ಟ್‌ನ ಮಾಲಕರಾದ ಶ್ರೀಮತಿ ಲಲಿತ ಹಾಗೂ ಬಾರ್ಕೂರಿನ ಶ್ಯಾಡೋ ಡಿಸೈನ್‌ನ ಮಾಲಕರಾದ ಕುಮಾರಿ ದೀಪ್ತಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಯಶೋಗಾಥೆ ಮತ್ತು ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಅಕೌಂಟಿಂಗ್, ಎಂಬ್ರಾಯ್ಡರಿ, ಫೋಟೋಗ್ರಫಿ ಹಾಗೂ ಕೃಷಿ ಉದ್ಯಮಿ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ಶ್ರೀ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಕಚೇರಿ ಸಹಾಯಕ ಶ್ರೀ ಶಾಂತಪ್ಪ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now