ಲಾರ್ಡ್ಸ್ ಏಕದಿನವೇ ರೋಹಿತ್ ಶರ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ?

ಲಾರ್ಡ್ಸ್ ಏಕದಿನವೇ ರೋಹಿತ್ ಶರ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ?
0Shares

ನವದೆಹಲಿ:ಜುಲೈ 19ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ

ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಭಾರತ ತಂಡದ ಹಿರಿಯ ಆರಂಭಿಕ ಬ್ಯಾಟ‌ರ್ ರೋಹಿತ್ ಶರ್ಮ ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಿರಿಯ ಆಯ್ಕೆ ಸಮಿತಿಯು, ಇಂಗ್ಲೆಂಡ್ ಸರಣಿ ಬಳಿಕ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಮುಂದಿನ ಯೋಜನೆ ರೂಪಿಸಿಕೊಂಡಿದ್ದು, ರೋಹಿತ್ ಶರ್ಮ ಅವರನ್ನು ಭವಿಷ್ಯದ ಯೋಜನೆಗಳಲ್ಲಿ ಪರಿಗಣಿಸದಿರುವ ಬಗ್ಗೆ ಅವರಿಗೆ ಈಗಾಗಲೇ ಮಾಹಿತಿ ನೀಡಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಕಳೆದ ವಾರ ಆಯ್ಕೆ ಸಮಿತಿಯು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಉಪಸ್ಥಿತಿಯಲ್ಲಿ ರೋಹಿತ್ ಶರ್ಮ ಅವರೊಂದಿಗೆ ತಂಡದ ಭವಿಷ್ಯದ ಕುರಿತು ಚರ್ಚೆ ನಡೆಸಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಯುವ ತಂಡವನ್ನು ಕಟ್ಟುವ ಉದ್ದೇಶ ಹೊಂದಿರುವ ಆಯ್ಕೆ ಸಮಿತಿಯು ಯಶಸ್ವಿ ಜೈಸ್ವಾಲ್‌ ಸೇರಿದಂತೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

“ಇಂಗ್ಲೆಂಡ್ ಪ್ರವಾಸದ ಬಳಿಕ ರೋಹಿತ್ ನಮ್ಮ ಮುಂದಿನ ಯೋಜನೆಗಳಲ್ಲಿ ಇಲ್ಲ ಎಂಬುದನ್ನು ಆಯ್ಕೆ ಸಮಿತಿ ಅವರಿಗೆ ತಿಳಿಸಿದೆ. ಅವರು ದೈಹಿಕ ಕ್ಷಮತೆ ಹೆಚ್ಚಿಸಿಕೊಂಡಿರುವ ಕಾರಣ ಇನ್ನೂ ಮುಂದುವರಿಯಲು ಬಯಸಿದ್ದರು. ಅಂತಿಮ ನಿರ್ಧಾರವನ್ನು ಅವರಿಗೇ ಬಿಟ್ಟಿದೆ,” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಶರ್ಮ ಅವರು ಬಿಸಿಸಿಐನ ಹಲವು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಆಯ್ಕೆ ಸಮಿತಿಯ ನಿರ್ಧಾರದಿಂದ ನಿರಾಶರಾಗಿದ್ದಾರೆ ಎನ್ನಲಾಗಿದೆ.

38 ವರ್ಷದ ರೋಹಿತ್ ಶರ್ಮ ಕಳೆದ ಎರಡು ವರ್ಷಗಳಲ್ಲಿ ಈಗಾಗಲೇ ಎರಡು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2024ರ ಜೂನ್ 29ರಂದು ಭಾರತವನ್ನು ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಬಳಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, 2025ರ ಮೇ 7ರಂದು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದರು.

ಕಳೆದ ವರ್ಷವೇ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ರೋಹಿತ್ ಅವರನ್ನು ಆಯ್ಕೆ ಸಮಿತಿ ಕೆಳಗಿಳಿಸಿ, ಶುಭ್ಮನ್ ಗಿಲ್ ಅವರನ್ನು ಹೊಸ ನಾಯಕರಾಗಿ ನೇಮಕ ಮಾಡಿತ್ತು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ತಂಡ ಕಟ್ಟುವ ಆಯ್ಕೆ ಸಮಿತಿಯ ಉದ್ದೇಶಕ್ಕೆ ಇದು ಸ್ಪಷ್ಟ ಸೂಚನೆ ಎಂದು ವಿಶ್ಲೇಷಿಸಲಾಗಿತ್ತು.

ಆದಾಗ್ಯೂ, ರೋಹಿತ್ ಶರ್ಮ ಅವರ ಏಕದಿನ ನಾಯಕತ್ವದ ಸಾಧನೆ ಗಮನಾರ್ಹವಾಗಿದೆ. ಅವರ ನಾಯಕತ್ವದಲ್ಲಿ ಭಾರತ 2023ರ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಆ ಟೂರ್ನಿಯಲ್ಲಿ ತಂಡವು ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಅಳವಡಿಸಿಕೊಂಡು 50 ಓರ್ವ ಕ್ರಿಕೆಟ್‌ನಲ್ಲಿ ಹೊಸ ಪರಿಕಲ್ಪನೆ ಮೂಡಿಸಿತ್ತು. ಅದೇ ನಿರ್ಭೀತಿಯ ಆಟವನ್ನು ಮುಂದುವರಿಸಿದ ಭಾರತ, 2024ರ ಟಿ20 ವಿಶ್ವಕಪ್‌ನಲ್ಲೂ ರೋಹಿತ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.ಆದರೆ ಇತ್ತೀಚಿನ ಪಂದ್ಯಗಳಲ್ಲಿ ರೋಹಿತ್ ಅವರ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿದ್ದು, ಅವರ ಕಳಪೆ ಫಾರ್ಮ್ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಎದ್ದಿವೆ.

ಮೂಲಗಳ ಮಾಹಿತಿ ನಿಜವಾದರೆ, ಶನಿವಾರ ಲಾರ್ಡ್ಸ್ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವು ಭಾರತದ ಅತ್ಯಂತ ಯಶಸ್ವಿ ಏಕದಿನ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮ ಅವರ ಸುದೀರ್ಘ ಏಕದಿನ ವೃತ್ತಿಜೀವನಕ್ಕೆ ತೆರೆ ಎಳೆಯುವ ಪಂದ್ಯವಾಗುವ ಸಾಧ್ಯತೆ ಇದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now