ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಜ್ಯಾರಿ_ತಂದವರು ಜವಾಹರಲಾಲ್ ನೆಹರೂ – ಡಾ. ಗಣನಾಥ ಶೆಟ್ಟಿ ಎಕ್ಕಾರು

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಜ್ಯಾರಿ_ತಂದವರು ಜವಾಹರಲಾಲ್ ನೆಹರೂ – ಡಾ. ಗಣನಾಥ ಶೆಟ್ಟಿ ಎಕ್ಕಾರು
0Shares

ಉದ್ಯಾವರ : ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದಲ್ಲಿ ಶ್ರೀಮಂತರು ಮಾತ್ರ ಶಿಕ್ಷಣ ಪಡೆದುಕೊಳ್ಳುತ್ತಿರುವ ಪರಿಸ್ಥಿತಿ ಇತ್ತು. ಬಡವರು ,ಹೆಣ್ಣುಮಕ್ಕಳು ದಲಿತರ ಪಾಲಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಇದನ್ನು ಮನಗೊಂಡು ಪ್ರಧಾನಿ ನೆಹರೂರವರು 1950ರಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರ ಫಲ ಏನಾಯ್ತು ಎಂದರೆ ಇಂದು ನಮ್ಮ ದೇಶದಲ್ಲಿ ಬಡವ ಬಲ್ಲಿದ ಲಿಂಗ ಭೇದ ಜಾತಿ ಭೇದ ಇಲ್ಲದೆ 75 ಪ್ರತಿಶತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಯಿತು. ನೆಹರೂರವರ ಈ ಕೆಲಸಕ್ಕೆ ನಾವು ಅವರಿಗೆ ಸದಾ ಚಿರ ಋಣಿಗಳಾಗಿರಬೇಕು. ಆದರೆ ಇಂಥ ಕೆಲಸ ಮಾಡಿದ ಮಹಾನ್ ನಾಯಕರನ್ನೇ ಹೀಗಳೆಯುವಂತಹ ಪರಿಪಾಠ ಇಂದು ಬೆಳೆಯುತ್ತಿದೆ. ಗಾಂಧಿ, ಅಂಬೇಡ್ಕರ್, ನೆಹರು ಮೊದಲಾದ ದೇಶ ಕಟ್ಟಿದ ಮಹಾನ್ ನಾಯಕರನ್ನು ವಿಮರ್ಶಿಸೋಣ ಅಭ್ಯಂತರವಿಲ್ಲ .ಆದರೆ ಅವರ ದೇಶ ಕಟ್ಟುವ ಕೆಲಸವನ್ನೇ ತಿರಸ್ಕರಿಸುವುದು ಈ ದೇಶದ ಬೆಳವಣಿಗೆಗೆ ಮಾರಕ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದು ಡಾ.ಕೆ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷರು ಚಿಂತಕರೂ ಆದ ಡಾ. ಗಣನಾಥ ಶೆಟ್ಡಿ ಎಕ್ಕಾರು ಅವರು, 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನೆಹರೂ ಜಯಂತಿ – ಮಕ್ಕಳ ದಿನಾಚರಣೆಯ ಪ್ರಯುಕ್ತ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರಗಿದ ಗ್ರಾಮದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ನೆಹರು ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ, ಮಕ್ಕಳ ಮೇಲೆ ಅತ್ಯಂತ ಪ್ರೀತಿಯನ್ನು ಇಟ್ಟುಕೊಂಡಿದ್ದ ನೆಹರೂರವರು ದೇಶದ ಮುಂದಿನ ಭವಿಷ್ಯ ಮಕ್ಕಳು. ಮಕ್ಕಳನ್ನು ಸದೃಢವಾಗಿ ಬೆಳೆಸಿದರೆ ದೇಶದ ಭವಿಷ್ಯ ಚೆನ್ನಾಗಿರುತ್ತದೆ ಎಂದು ದೃಢವಾಗಿ ನಂಬಿದ್ದರು ಮತ್ತು ಅದಕ್ಕೆ ಬೇಕಾಗುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದರು. ಮಕ್ಕಳ ಅಭಿವೃದ್ಧಿಯನ್ನ ಪ್ರೀತಿಸಿದ ಒಬ್ಬ ನಾಯಕ ಭಾರತದಲ್ಲಿ ಇದ್ದಾರೆ ಎಂದರೆ ಅವರು ನೆಹರೂ ಮಾತ್ರ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಡತನ, ಅನಕ್ಷರತೆ ನಿರುದ್ಯೋಗದಿಂದ ದೇಶ ನರಳುತ್ತಿತ್ತು. ಅವೆಲ್ಲವನ್ನು ಮೀರಿ ದೇಶದ ಅಭಿವೃದ್ಧಿಯನ್ನು ಮಾಡಬೇಕಾದರೆ ಅದಕ್ಕೊಂದು ದೀಃಶಕ್ತಿ ಬೇಕಿತ್ತು. ಅದು ನೆಹರೂರವರಲ್ಲಿ ಇತ್ತು ಅದಕ್ಕೆ ಪೂರಕವಾಗಿ ಡಾ. ಬಿ .ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿ ದೇಶದ ಸರ್ವ ಜನಾಂಗ ಸರ್ವಧರ್ಮದ ನೆಲೆವಿಡನ್ನಾಗಿ ಬೆಳೆಯಲು ಕಾರಣಕರ್ತರಾದರು. ಇಂದು ದೇಶ ಅಭಿವೃದ್ಧಿಯ ನೆಲೆಯಲ್ಲಿ ಬೆಳೆಯುತ್ತದೆ ಎಂದರೆ ಅದಕ್ಕೆ ಕಾರಣ ನೆಹರೂ ಹಾಕಿದ ಗಟ್ಟಿ ಪಂಚಾಂಗ. ಈ ಪಂಚಾಂಗದ ಮೇಲೆಯೇ ದೇಶ ಅಭಿವೃದ್ಧಿ ಕಾಣುತ್ತಿದೆ.

ಮುಖ್ಯವಾಗಿ ವಿದ್ಯಾರ್ಥಿಗಳು ನಮ್ಮ ದೇಶ ಕಟ್ಟಿದ ನಾಯಕರ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕಾದರೆ ಯಾರು ಯಾರೋ ಹೇಳಿದ ಹೇಳಿಕೆಗಳು, ಸೋಶಿಯಲ್ ಮೀಡಿಯಾದಲ್ಲಿ ಬರುವ ಒಂದು ವಾಕ್ಯದ ಹೇಳಿಕೆಗಳಿಂದ ಅಲ್ಲ. ಅಂತಹ ನಾಯಕರ ಜೀವನ ,ಅವರು ಬದುಕಿದ ರೀತಿ, ಕೆಲಸಗಳನ್ನು ಓದುವ ಮೂಲಕ ಅವರ ವ್ಯಕ್ತಿತ್ವವನ್ನು ನಾವು ನಿರ್ಧರಿಸಬೇಕು. ಆಗ ನಿಮಗೆ ಅವರ ನೈಜ್ಯ ಚಿತ್ರಣದ ಅರಿವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡಿ, ದೇಶದ ನಿರ್ಮಾತೃಗಳನ್ನು ಅವಮಾನ ಮಾಡುವ ಟ್ರೆಂಡ್ ಸುಮಾರು 10-12 ವರ್ಷಗಳಿಂದ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಈ ಬಗ್ಗೆ ವಿದ್ಯಾರ್ಥಿಗಳು

ಸತ್ಯಾಸತ್ಯತೆಯನ್ನು ಮನಗಂಡು ನಿರ್ಧಾರಕ್ಕೆ ಬರಬೇಕು. ವೈಜ್ಞಾನಿಕ ನೆಲಗಟ್ಟಲ್ಲಿ ಭಾರತವನ್ನು ಕಟ್ಟಿದ ನೆಹರೂರವರು ಇಂದು ದೇಶವನ್ನು ಪ್ರಪಂಚದ ಅಗ್ರಸ್ಥಾನದಲ್ಲಿ ನಿಲ್ಲಿಸಿರುವರು. ಒಂದು ದೇಶದ ಅಭಿವೃದ್ಧಿಯನ್ನು ಕಾಣಬೇಕಾದರೆ ಆದೇಶದ ಮಗುವಿನ ಕಣ್ಣು ಸಂತೋಷದಿಂದ ಮಿನುಗುತಿರಬೇಕು ಎಂಬುದನ್ನು ದೃಡವಾಗಿ ನಂಬಿದ ನೆಹರೂರವರು ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿದ್ದರು. ಆಧುನಿಕ ಭಾರತದ ದೇವಾಲಯಗಳು ಎಂದರೆ ಅದು ಅಣೆಕಟ್ಟುಗಳು ಎಂಬ ಕಲ್ಪನೆಯಲ್ಲಿ ಕೃಷಿ ಸಂಬಂಧಿ ಅಭಿವೃದ್ಧಿ ಕೆಲಸಗಳಿಗೆ ಮಹತ್ವವನ್ನು ಕೊಟ್ಟಿದ್ದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಅಭಿವೃದ್ಧಿಯ ನೆಲಗಟ್ಟಲ್ಲಿ ಕಟ್ಟುವಲ್ಲಿ ಅವರು ಶ್ರಮಿಸಿದ್ದರು. ನಮ್ಮ ದೇಶದ ರಕ್ಷಣಾ ಕವಚ ಎಂದರೆ ಅದು ನಮ್ಮ ಸಂವಿಧಾನ ಇಂತಹ ಸಂವಿಧಾನ ರಚನೆ ಮಾಡಲು ಡಾಕ್ಟರ್ ಅಂಬೇಡ್ಕರ್ ರಂತಹ ಒಬ್ಬ ಮಹಾನ್ ವ್ಯಕ್ತಿಗೆ ಕೊಟ್ಟಿರುವುದು ನೆಹರೂರವರ ಮಹತ್ತರವಾದ ನಿರ್ಧಾರ ಈ ಸಂವಿಧಾನವನ್ನು ವಿರೋಧಿಸುವ ಸಮಾಜದ ಜಾತಿ ವ್ಯವಸ್ಥೆಯ ಮೇಲ್ ಸ್ತರದಲ್ಲಿ ಇರುವ ಫಲಾನುಭವಿಗಳು ಇಂದು ಸಂವಿಧಾನವನ್ನು ವಿರೋಧಿಸುತ್ತಾರೆ. ಅದಕ್ಕಾಗಿ ಶ್ರಮಿಸಿದ ಅಂಬೇಡ್ಕರ್ ಗಾಂಧಿ ನೆಹರೂರವರನ್ನು ಕೂಡ ವಿರೋಧಿಸುತ್ತಾರೆ .ಇದು ಮುಂದುವರಿದರೆ ದೇಶಕ್ಕೆ ಅಪಾಯ ಬರಬಹುದು. ಈ ಚಾಳಿಯ ಮುಂದುವರಿದ ಭಾಗವಾಗಿಯೇ ಇಂದು ಒಬ್ಬ ವ್ಯಕ್ತಿ ಬಸವಣ್ಣರನ್ನು ಅವಮಾನಿಸಿ ರಚನೆ ಮಾಡಿದ ಪುಸ್ತಕ ವಿವಾದಕ್ಕೆ ಇದೀಗ ಒಳಗಾಗಿದೆ. ಹಾಗಾಗಿ ವಿದ್ಯಾರ್ಥಿಗಳೇ ನಮ್ಮ ನಾಯಕರ ಬಗ್ಗೆ ನಿಜ ಚರಿತ್ರೆ ತಿಳಿಯೋದು ಈ ಕಾಲಘಟ್ಟದಲ್ಲಿ ಅತ್ಯಂತ ಮಹತ್ತರವಾದುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾ ತಾವ್ರೋ ಅವರು ಮತ್ತು ತೀರ್ಪುಗಾರರಾಗಿ ಆಗಮಿಸಿದ ಕಲಾವಿದ ವಿಶ್ವೇಶ್ವರ ಪರ್ಕಳ ಅವರು ಸಂದರ್ಭೋಜಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕಿ ಚಂದ್ರಾವತಿ ಎಸ್. ಭಂಡಾರಿ, ಕೋಶಾಧಿಕಾರಿ ಸತೀಶ್ ಡಿ. ಸಾಲಿಯಾನ್ ಉಪಸ್ಥಿತರಿದ್ದರು .

ಈ ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸಂಸ್ಥೆಯ ಕಾರ್ಯದರ್ಶಿ ಆಶಾವಾಸು, ಸದಸ್ಯರಾದ ಆನ್ಸರ್ ಸತ್ತಾರ್, ಮಹಮ್ಮದ್ ಆಲಿ, ಅಜಿತ್ ಮೆಂಡನ್, ಸೋಮಶೇಖರ ಸುರತ್ಕಲ್ ಮೊದಲಾದವರು ಹಾಜರಿದ್ದರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ತಿಲಕರಾಜ್ ಸಾಲಿಯಾನ್ ಸ್ಪರ್ಧಾ ವಿಜೇತರ ಹೆಸರನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿಸುಹೇಲ್ ರಹಮತುಲ್ಲ ಅವರು ವಂದಿಸಿದರು. ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ರವರು ಕಾರ್ಯಕ್ರಮ ನಿರ್ವಹಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now