
ಬೆಂಗಳೂರು : ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಕೇಂದ್ರ
ಸರಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿರುವ ರಾಜ್ಯ ಸರಕಾರ ನಿಲುವಿನ ಮೇಲೆ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಮುಖ ನಿರ್ಣಯವನ್ನು ಮಂಡಿಸಿದ್ದು, ಇದಕ್ಕೆ ವಿಪಕ್ಷಗಳು ಸೇರಿದಂತೆ ಸದನದ ಎಲ್ಲಾ ಸದಸ್ಯರು ಒಮ್ಮತದ ಬೆಂಬಲ ಸೂಚಿಸಿದರು.
ಇದಕ್ಕೂ ಮೊದಲು ನಿರ್ಣಣ ಮಂಡಿಸಿದ ಡಿ.ಕೆ.ಶಿವಕುಮಾರ್, ಕಸ್ತೂರಿ ರಂಗನ್ ವರದಿಯಲ್ಲಿ ಕಂಡುಬಂದಿರುವ ಹಲವು ಗಂಭೀರ ನ್ಯೂನ್ಯತೆಗಳು ಮತ್ತು ಸಾರ್ವಜನಿಕರ ಆತಂಕಗಳನ್ನು ಸರಿಪಡಿಸಲು ರಾಜ್ಯ ಸರಕಾರದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ.
ಈ ಸಮಿತಿಯು ವರದಿಯ ಎಲ್ಲ ಅಂಶಗಳು, ಕೃಷಿ ಭೂಮಿಯ ಗಡಿ ಗುರುತಿಸುವಿಕೆ ಹಾಗೂ ಪರಿಸರ ಸೂಕ್ಷ್ಮ ವಲಯದ ತಾಂತ್ರಿಕ ಲೋಪಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.
ಕೇಂದ್ರ ಸರಕಾರವು ಸೆಪ್ಟೆಂಬರ್ 27ರೊಳಗೆ ರಾಜ್ಯದ ಅಂತಿಮ ನಿಲುವನ್ನು ತಿಳಿಸುವಂತೆ ಕೇಳಿದ್ದು, ಈ ಹಿನ್ನೆಲೆಯಲ್ಲಿ ಶಾಸನಸಭೆಯ ಸರ್ವಾನುಮತದ ನಿರ್ಣಯವನ್ನು ಕೇಂದ್ರ ಗೃಹ ಹಾಗೂ ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು. ಅಗತ್ಯಬಿದ್ದರೆ ಸರ್ವಪಕ್ಷ ನಿಯೋಗವನ್ನು ಹೊಸದಿಲ್ಲಿಗೆ ಕೊಂಡೊಯ್ದು ಮನವಿ ಸಲ್ಲಿಸಲು ಮತ್ತು ನಿವೃತ್ತ ನ್ಯಾಯಾಧೀಶರ ಸಮಿತಿಯ ವರದಿ ಆಧಾರದ ಮೇಲೆ ಕೇಂದ್ರಕ್ಕೆ ಸೂಕ್ತ ಪರ್ಯಾಯ ಪ್ರಸ್ತಾವನೆ ಸಲ್ಲಿಸಲು ಸರಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯ ನಿಬಂಧನೆಗಳಿಂದ ರಾಜ್ಯದ 10 ಜಿಲ್ಲೆಗಳ ಸುಮಾರು 1,449ಕ್ಕೂ ಹೆಚ್ಚು ಗ್ರಾಮಗಳ ಜನರ ಜೀವನೋಪಾಯಕ್ಕೆ ಧಕ್ಕೆಯಾಗುವ ಭೀತಿಯಿದೆ. ಕೃಷಿ ಭೂಮಿ, ಜನವಸತಿ ಪ್ರದೇಶಗಳು ಮತ್ತು ಖಾಸಗಿ ತೋಟಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿರುವುದು ಅಶಾಂತಿಗೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರಕಾರ ನೀಡಿರುವ 7ನೇ ಕರಡು ಅಧಿಸೂಚನೆಯನ್ನು ನಾವು ಯಥಾವತ್ತಾಗಿ ಒಪ್ಪಲು ಸಾಧ್ಯವಿಲ್ಲ ಎಂದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now