
ಬಂಟ್ವಾಳ(ದಕ್ಷಿಣ ಕನ್ನಡ):ಬಿಸಿ ರೋಡ್ನ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಸ್ಗೆ ಕಾಯುತ್ತಿದ್ದ ಯುವತಿ ಮೇಲೆ ಕಿಡಿಗೇಡಿ ಯುವಕನೊಬ್ಬ ತಲವಾರಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ.
ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ(25) ಕೊಲೆಯಾದ ಯುವತಿಯಾಗಿದ್ದು, ಚೇತನ್ ಕೊಲೆ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಇಂದು ಸಂಜೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ದೂರ ಸಂಬಂಧಿಯಾದ ಚೇತನ್, ಲಾವಣ್ಯ ಅವರನ್ನು ಪ್ರೀತಿಸುತ್ತಿದ್ದು, ಆಕೆಗೆ ಇಷ್ಟವಿರಲಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಈ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಅಲರ್ಟ್ ಆಗಿ, ಆರೋಪಿಯ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಕಕ್ಯಪದವು ಮೈರ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ ಅಲ್ಲಿಂದ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಿ.ಸಿ.ರೋಡ್ ಕಕ್ಯಪದವು ಕೆಎಸ್ಆರ್ಟಿಸಿ ಬಸ್ ಹತ್ತಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಯುವಕ ಅಲ್ಲಿಗೆ ಬಂದಿದ್ದಾನೆ. ಆತನನ್ನು ಕಂಡು ಬೆದರಿ ಅಲ್ಲಿಂದ ಇಳಿದ ವೇಳೆ ಯುವಕ ಬೆನ್ನಟ್ಟಿದ್ದು, ತನ್ನ ಬ್ಯಾಗ್ನಿಂದ ಹರಿತವಾದ ಆಯುಧವನ್ನು ಹೊರತೆಗೆದಿದ್ದಾನೆ. ಕೂಡಲೇ ಯುವತಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ತಲವಾರಿನಿಂದ ಬೀಸಿದ್ದಾನೆ. ಹಿಂಬಾಲಿಸಿಕೊಂಡು ಹೋಗಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಬಳಿಕ ಬಸ್ ನಿಲ್ದಾಣದ ಇನ್ನೊಂದು ಭಾಗದಿಂದ ಹೆದ್ದಾರಿ ಕಡೆಗೆ ಓಡಿ, ವಾಹನವೊಂದರಲ್ಲಿ ಪರಾರಿಯಾಗಿದ್ದಾನೆ.
ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿ ನರಳುತ್ತಿದ್ದ ಯುವತಿಯನ್ನು ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆಯ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ತೀವ್ರಗೊಂಡಿದೆ.
.
.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now