ಮಂಜುನಾಥ್ ಉದ್ಯಾವರರ ಬದುಕೇ ಒಂದು ಸಂದೇಶ – ಎಂ.ಎ. ಗಫೂರ್

ಮಂಜುನಾಥ್ ಉದ್ಯಾವರರ ಬದುಕೇ ಒಂದು ಸಂದೇಶ – ಎಂ.ಎ. ಗಫೂರ್
0Shares

ಉದ್ಯಾವರ : ವ್ಯಕ್ತಿಗಳು ಹುಟ್ಟುತ್ತಾರೆ, ಬದುಕುತ್ತಾರೆ ಕೊನೆಗೊಂದು ದಿನ ಸಾಯುತ್ತಾರೆ. ಆದರೆ ಕೆಲ ವ್ಯಕ್ತಿಗಳು ಹುಟ್ಟುತ್ತಾರೆ, ಬದುಕುತ್ತಾರೆ, ಸಾಯುತ್ತಾರೆ ಆದರೆ ಸಾಯುವಾಗ ಅವರ ಬದುಕನ್ನು ಒಂದು ಸಂದೇಶವಾಗಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಾರೆ. ಅದಕ್ಕೆ ಬದುಕಿನ ಸಾರ್ಥಕತೆ ಎನೋದು. ಹಾಗೆ ಬದುಕಿದವರು ಮಂಜುನಾಥ್ ಉದ್ಯಾವರ್. ಹಾಗಾಗಿ ಅವರು ಕಾಲವಾಗಿ ಹದಿನಾಲ್ಕು ವರ್ಷ ಸಂದರೂ ಅವರು ನಮ್ಮನ್ನು ನಿನ್ನೆ ಮೊನ್ನೆ ಬಿಟ್ಟಗಲಿದ್ದಾರೆ ಎಂಬ ಭಾವ. ಅಲ್ಲದೇ ಇಷ್ಟೂ ವರ್ಷಗಳ ನಂತರವೂ ಅವರ ನೆನಪಿನ ಕಾರ್ಯಕ್ರಮ ಜರಗುತ್ತದೆ. ಇದು ಒಬ್ಬ ಮನುಷ್ಯನ ಬದುಕಿಗೆ ಸಾರ್ಥಕತೆಯನ್ನು ಕೊಡುವ ಗಳಿಗೆ. ಇದು ಮಂಜುನಾಥ್ ಉದ್ಯಾವರವರಿಗೆ ದಕ್ಕಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ, ಮಂಜುನಾಥ್ ಉದ್ಯಾವರ್ ರವರ ಆಪ್ತರೂ ಆದಂತಹ ಎಮ್.ಎ .ಗಫೂರ್ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಂಗಣದಲ್ಲಿ ಜರಗಿದ ಸಂಸ್ಥೆಯ ಗೌರವಾಧ್ಯಕ್ಷರೂ ಗ್ರಾಮದ ಅಭಿವೃದ್ಧಿಯ ಹರಿಕಾರರೂ ಆದ ಮಂಜುನಾಥ್ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮ ‘ಮಂಜಣ್ಣ ನೆನಪು – 14’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ, ಮಂಜು ರಾಜಕೀಯವಾಗಿ ಆಯಕಟ್ಟಿನ ಜಾಗದಲ್ಲಿದ್ದರೂ ಅವರು ಎಂದೂ ಕೂಡ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಅವರು ಬಯಸಿದ್ದರೆ ಅಧಿಕಾರ ಸ್ಥಾನ ಮಾನ ಪಡೆದುಕೊಳ್ಳಬಹುದಿತ್ತು . ಅದು ಬಂದಾಗ ಬರಲಿ ಬಾರದಿದ್ದರೆ ಬೇಸರವಿಲ್ಲ ನನ್ನ ಕೆಲಸ ನನ್ನದು ಎಂಬ ಒಂದು ರೀತಿಯ ನಿರ್ಲಿಪ್ತ ಭಾವ ಅವರದ್ದು‌. ಇದು ರಾಜಕೀಯದಲ್ಲಿ ಅಪರೂಪವಾದದು. ಮುಖ್ಯವಾಗಿ ಉದ್ಯಾವರವನ್ನು ಒಂದು ಸೌಹಾರ್ದತೆಯ ನೆಲೆಯಲ್ಲಿ ಅಭಿವೃದ್ಧಿಗೊಳಿಸಲು ಮಂಜುನಾಥ್ ಉದ್ಯಾವರ್ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮೂಲಕ ಪ್ರಯತ್ನ ಪಟ್ಟಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅದಕ್ಕೆ ಸಾಕ್ಷಿ ಈಗಿನ ಉದ್ಯಾವರ ಮತ್ತು ಇಂದಿನ ಕಾರ್ಯಕ್ರಮ ಎಂದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಡುಬಿದ್ರೆ ಸಿ.ಎ . ಬ್ಯಾಂಕಿನ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ರವರು ಮಾತನಾಡಿ, ಮಂಜಣ್ಣ ರಾಜಕೀಯದಲ್ಲಿ ಇದ್ದರೂ ಕೂಡ ರಾಜಕೀಯದ ಕೆಸರನ್ನು ಮೈಗೆ ಅಂಟಿಸಿಕೊಂಡವರಲ್ಲ. ನೇರ ನಡೆ-ನುಡಿಯಿಂದ ಕೆಲಸ ಮಾಡಿದವರು. ರಾಷ್ಟ್ರ ನಾಯಕ ಓಸ್ಕರ್ ಫೆರ್ನಾಂಡಿಸ್ ರವರ ಕಾರ್ಯದರ್ಶಿಯಾಗಿದ್ದರೂ ಅವರ ಪ್ರಭಾವವನ್ನು ತನ್ನ ವೈಯಕ್ತಿಕ ಬದುಕಿನಲ್ಲಿ ಎಂದೂ ಕೂಡ ಬಳಸಿಕೊಂಡವರಲ್ಲ. ಅವರ ಮುಖ್ಯ ಗುಣ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸಿ ಬೆಳೆಸುವುದು . ಅವರು ತಪ್ಪಿದಲ್ಲಿ ಅವರನ್ನು ಕರೆದು ಬುದ್ಧಿ ಹೇಳಿ ಅವರು ಬೆಳೆಯಲು ಸಾಕಷ್ಟು ಅವಕಾಶವನ್ನು ಮಾಡಿಕೊಡುವುದು. ಇಂಥವರು ಪ್ರಸ್ತುತ ರಾಜಕೀಯ ರಂಗದಲ್ಲಿ ಸಿಗುವುದು ಕಷ್ಟ. ರಾಜಕೀಯದಲ್ಲಿ ಕೆಲಸ ಮಾಡುವ ಯುವಕರನ್ನು ಗುರುತಿಸುವ ಕೆಲಸ ಕಾರ್ಯವನ್ನು ಮಂಜಣ್ಣ ಮಾಡುತ್ತಿದ್ದರು. ಹಾಗಾಗಿ ಮಂಜಣ್ಣ ಅಂತವರ ಮನಸ್ಸಲ್ಲಿ ಇಂದು ಕೂಡ ಬಾಳಿ ಬದುಕಿದ್ದಾರೆ. ನನ್ನ ಕಚೇರಿಗೆ ಸಮಸ್ಯೆಯನ್ನು ಹೊತ್ತುಕೊಂಡು ಬರುವವರು ಹೋಗುವಾಗ ಸಮಸ್ಯೆ ಪರಿಹಾರದ ದಾರಿಯನ್ನು ಕಂಡುಕೊಂಡು ಹೋಗಬೇಕು ಎಂಬುದು ಮಂಜಣ್ಣನವರ ಆಶಯ. ಹಾಗೆ ಮಾಡುತ್ತಿದ್ದರು ಕೂಡಾ. ಮುಖ ಕುಂದಿಸಿ ಕೊಂಡು ಬರುವವರು ಹೋಗುವಾಗ ನಗುಮುಖದಿಂದ ಹೋಗುತ್ತಿದ್ದರು ಇದು ಮಂಜಣ್ಣನ ಸ್ಪೆಷಾಲಿಟಿ ಎಂದರು.

ಮುಖ್ಯ ಅತಿಥಿ ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಉಲ್ಲಾಸ ಆರ್. ಶೆಟ್ಟಿ ಅವರು ಮಾತನಾಡುತ್ತಾ, ಮಂಜಣ್ಣನನ್ನು ನಾನು ಹತ್ತಿರದಿಂದ ಬಲ್ಲೆ ನಾನೂ ರಾಜಕೀಯದಲ್ಲಿ ಇದ್ದವನು, ರಾಜಕೀಯವಾಗಿ ಒಬ್ಬ ಮನುಷ್ಯ ಹೇಗೆ ಇರಬೇಕು ಅನ್ನುವುದನ್ನು ನಾನು ಅವರನ್ನು ನೋಡಿ ಕಲಿತೆ . ಅವರ ಸರಳತೆ ಎಲ್ಲರೊಡನೆ ಬೆರೆಯುವ ಪರಿ ನೋಡಿದಾಗ ಆಶ್ಚರ್ಯವಾಗುತ್ತಿತ್ತು. ಅವರು ಇದ್ದ ಸ್ಥಿತಿಯಲ್ಲಿ ಯಾವುದೇ ಹುದ್ದೆ ಪಡೆದುಕೊಂಡು ಆರಾಮದ ಬದುಕು ಬದುಕ ಬಹುದಿತ್ತು. ಆದರೆ ಅವರು ಆ ವ್ಯಾಮೋಹಕ್ಕೆ ಬೀಳದೆ ರಾಷ್ಟ್ರ ನಾಯಕ ಓಸ್ಕರ್ ಫೆರ್ನಾಂಡಿಸ್ ರಿಗೆ ನಿಷ್ಠರಾಗಿ ಕೊನೆಯ ತನಕ ಜನಸಾಮಾನ್ಯರ ಸೇವೆಯನ್ನು ಮಾಡುತ್ತಾ ಕಳೆದರು. ಎಷ್ಟೋ ನಾಯಕರುಗಳನ್ನ ಬೆಳೆಸುವಲ್ಲಿ ಅವರ ಸಹಾಯವಿತ್ತು. ರಾಜಕೀಯದಲ್ಲಿ ಮಂಜಣ್ಣ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ ಮತ್ತು ಮತ್ತಷ್ಟು ಗಟ್ಟಿಗಾಗಿ ಈ ಮೂಲಕ ಉದ್ಯಾವರದ ಅಭಿವೃದ್ಧಿಗೆ ಒಂದು ಹೊಸ ಅರ್ಥವನ್ನೇ ಕೊಟ್ಟಿದ್ದಾರೆ. ಹಾಗಾಗಿ ಉದ್ಯಾವರದ ಜನ ಎಂದಿಗೂ ಮಂಜಣ್ಣನನ್ನು ಮರೆಯಲು ಸಾಧ್ಯವಿಲ್ಲ. ಅವರು ಉದ್ಯಾವರದ ಜನರ ಮನಸ್ಸಲ್ಲಿ ನಿರಂತರವಾಗಿ ಬದುಕಿಯೇ ಇರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಅಶಕ್ತರಿಗೆ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವು ವಿತರಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಯು. ಪದ್ಮನಾಭ ಕಾಮತ್ ಉಪಸ್ಥಿತರಿದ್ದರು .

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ತಿಲಕ್ ರಾಜ್ ಸಾಲಿಯಾನ್ ವೈದ್ಯಕೀಯ ನೆರವಿನ ಫಲಾನುಭವಿಗಳ ಹೆಸರು ವಾಚಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಭಿ ಥಿಯೇಟರ್ಸ್ ಮಂಗಳೂರು ಕಲಾವಿದರಿಂದ ಶೇಕ್ಸ್ಪಿಯರ್ನ ಮ್ಯಾಕ್ಬೆತ್ ನಾಟಕದ ರೂಪಾಂತರ ‘ಮಾರಿ ಕಾಡ್'( ಕನ್ನಡ : ಡಾ. ಚಂದ್ರಶೇಖರ್ ಕಂಬಾರ ,ತುಳು ಡಾ. ಮೀನಾಕ್ಷಿ ರಾಮಚಂದ್ರ, ನಿರ್ದೇಶನದ ರೋಹಿತ್ ಎಸ್ ಬೈಕಾಡಿ) ತುಳು ಆಪ್ತರಂಗ ಪ್ರಯೋಗ ಜರಗಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now