
“ಯುವಜನತೆಯೇ ದೇಶದ ನಿಜವಾದ ಸಂಪತ್ತು. ನಮ್ಮ ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ಯುವವಾಹಿನಿ ಸಂಸ್ಥೆಯ ನಿರಂತರ ಸೇವೆ ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಯುವಶಕ್ತಿ ಸದಾ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಬ್ರಿಟನ್ ಬಿಲ್ಲವ ಬಳಗದ ಮುಖ್ಯಸ್ಥ, ಅನಿವಾಸಿ ಭಾರತೀಯ ವೈದ್ಯರಾದ ಡಾ. ಪಿ.ಕೆ ಮನೋಜ್ ಪೂಜಾರಿ ಅವರು ತಿಳಿಸಿದರು.

ಶ್ರೀಯುತರು ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ಭಾನುವಾರ ಆಗಸ್ಟ್ 30ರಂದು ಜರುಗಿದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪಿ ಕೆ ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ಅವರು ನೂತನ ಅಧ್ಯಕ್ಷರಾದ ಶ್ರೀ ನಿಖಿಲ್ ಪೂಜಾರಿ ಹಾಗೂ ಅವರ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಿರ್ಗಮಿತ ಅಧ್ಯಕ್ಷರಾದ ಶ್ರೀ ವಿಧಿತ್ ಕುಮಾರ್ ಕರ್ನಿರೆ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ, ತನ್ನ ಅಧ್ಯಕ್ಷ ಅವಧಿಯಲ್ಲಿ ಸಹಕರಿಸಿದ ಸರ್ವರಿಗೆ ವಂದಿಸಿ, ಮುಂದಿನ ಸಾಲಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಯುವ ಉದ್ಯಮಿ ಶ್ರೀ ಗಣೇಶ್ ಗುಜರನ್, ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಕೆ ಕಿರಣ್ ಕುಮಾರ್, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ವೈ. ಸುಧೀರ್ ಕುಮಾರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಮಮತಾ ರಾಜ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಯುವವಾಹಿನಿಯ ಕಳೆದ ವರ್ಷದ ಯಶಸ್ವಿ ಸಾಧನೆಯ ಹೆಜ್ಜೆಗಳನ್ನು ಪ್ರಶಂಸಿಸಿ, ನೂತನ ತಂಡಕ್ಕೆ ಶುಭ ಹಾರೈಸಿದರು.
ಪಿ.ಕೆ ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ‘ಪಿ.ಕೆ ಜಯರಾಮ್ ಪ್ರವರ್ತಿತ ವಿದ್ಯಾನಿಧಿ’ಯನ್ನು ವಿತರಿಸಲಾಯಿತು. ಯುವವಾಹಿನಿಯ ಸದಸ್ಯರ ಕುಟುಂಬದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಗಣ್ಯರಿಗೆ ಸನ್ಮಾನ : ಸಮಾಜಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಡಾ. ಪಿ.ಕೆ ಮನೋಜ್ ಪೂಜಾರಿ ಮತ್ತು ಡಾ. ಬೃಂದಾ ಮನೋಜ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಘಟಕದ ಚಟುವಟಿಕೆಗಳಿಗೆ ಸದಾಕಾಲ ಮಾರ್ಗದರ್ಶನ ಹಾಗೂ ಸಹಕಾರ ನೀಡುವ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ವಿಧಿತ್ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಇದೇ ವೇದಿಕೆಯಲ್ಲಿ ಕೃತಜ್ಞತಾಪೂರ್ವಕವಾಗಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಶ್ರೀ ವಿಧಿತ್ ಕುಮಾರ್ ಗಣ್ಯರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್ ಅವರು ಕಾರ್ಯಕ್ರಮದ ಪ್ರಸ್ತಾವನೆಗೈದರು. ನಿರ್ಗಮಿತ ಕಾರ್ಯದರ್ಶಿ ಶ್ರೀ ಭಾಸ್ಕರ್ ಎನ್. ಅಂಚನ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಅವಿನಾಶ್ ಧನ್ಯವಾದ ಸಮರ್ಪಿಸಿದರು.
ಶ್ರೀಮತಿ ಚೈತ್ರ ಗಣೇಶ್, ಶ್ರೀಮತಿ ಚೈತ್ರ ಮನೋಹರ್ ಹಾಗೂ ಶ್ರೀ ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now