
ಉಡುಪಿ : ನೀಟ್ ಪರೀಕ್ಷೆಯಲ್ಲಿ ನಡೆಯಲಾದ ಅಕ್ರಮವನ್ನು ಖಂಡಿಸಿ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಭಾರಿ ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಸಂಸತ್ ಭವನದ ಬಳಿ ಭದ್ರತಾ ಪಡೆಗಳು ಅಶ್ರುವಾಯು ಮತ್ತು ಲಾಠಿಚಾರ್ಜ್ ಪ್ರಯೋಗಿಸುವಂತೆ ಪ್ರೇರೆಪಿಸಿದ ಕೇಂದ್ರ ಸರಕಾರದ ನಡೆ ಖಂಡನೀಯ, ಅಸಾಂವಿಧಾನಿಕ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯ ಪ್ರಶ್ನಾಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವುದು ಹಾಗೂ ಹಲವಾರು ವಿದ್ಯಾರ್ಥಿಗಳು ಇದಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಕೇಂದ್ರ ಸರಕಾರದ ನಡೆ ಕಳವಳಕಾರಿಯಾಗಿದೆ.
ನೀಟ್ ಪರೀಕ್ಷೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ್ದಲ್ಲದೆ ಹಲವಾರು ವಿದ್ಯಾರ್ಥಿಗಳು ಇದಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡರೂ ಕೇಂದ್ರದ ಶಿಕ್ಷಣ ಸಚಿವ ಇದೊಂದು ಸಣ್ಣ ವಿಚಾರ ಎನ್ನುವಂತೆ ವರ್ತಿಸುತ್ತಿದ್ದಾರೆ. ಅವರ ರಾಜೀನಾಮೆಯನ್ನು ಕೇಳಿದ ಮುಗ್ದ ವಿದ್ಯಾರ್ಥಿಗಳ ಮೇಲೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ನಡೆದ ಲಾಠಿಚಾರ್ಚ್ ನಿಜಕ್ಕೂ ಬಿಜೆಪಿಗರಿಗೆ ವಿದ್ಯಾರ್ಥಿಗಳ ಭವಿಷ್ಯ ಮೇಲೆ ಇರುವ ಕಾಳಜಿ ಏನು ಎನ್ನುವುದು ಜಗಜ್ಜಾಹೀರು ಆಗಿದೆ.
ಕೇಂದ್ರ ಸರಕಾರ ಪ್ರತಿಭಟನಾಕಾರರನ್ನು ಬಲಪ್ರಯೋಗದಿಂದ ಹತ್ತಿಕ್ಕಲು ಹಾಗೂ ಭಿನ್ನಾಭಿಪ್ರಾಯದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಶಾಂತಿಯುತವಾಗಿ ಆತಂಕ ವ್ಯಕ್ತಪಡಿಸುತ್ತಿದ್ದರೆ, ಅವರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಕೇಂದ್ರ ಸರ್ಕಾರ ಲಾಠಿ ಚಾರ್ಜ್ ಮೂಲಕ ಬಲಪ್ರಯೋಗಕ್ಕೆ ಮುಂದಾಗಿದೆ. ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಕೂಡ ಸಂಶಯವನ್ನು ಮೂಡಿಸುತ್ತಿದೆ.
ಜಿಲ್ಲೆಯಲ್ಲಿ ಕೂಡ ಸಾವಿರಾರು ಮಂದಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಅಕ್ರಮದಿಂದ ನೊಂದಿದ್ದಾರೆ. ನಮ್ಮ ಸಂಸದರು ಸದಾ ಕಾಲ ಪ್ರತಿ ವಿಚಾರದಲ್ಲೂ ಮಾತನಾಡುವವರು ನೀಟ್ ಗೊಂದಲದ ಬಗ್ಗೆ ಮೌನವಾಗಿರುವುದರ ಉದ್ದೇಶವೇನು? ಬೇರೆ ವಿಚಾರಗಳಿಗೆ ಸದಾ ರಾಜ್ಯದ ಮಂತ್ರಿಗಳ ರಾಜೀನಾಮೆ ಕೇಳುವು ಸಂಸದರು ನೀಟ್ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ. ಬಿಜೆಪಿ ಶಾಸಕರು ಸಂಸದರು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತನೆ ಮಾಡುವುದರಲ್ಲಿ ನಿಸ್ಸೀಮರು ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಬಿಜೆಪಿಗರಿಗೆ ಒಂದು ರೀತಿ ಚಟವಾಗಿದ್ದು ನೀಟ್ ವಿಚಾರದಲ್ಲಿ ಕೂಡ ಅವರ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ.
ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಕೇಂದ್ರ ಸರಕಾರ, ಬಿಜೆಪಿ ಇಂತಹ ನಿರ್ಲಕ್ಷ್ಯ ಧೋರಣೆ ತಾಳಿದರೆ ಮುಂದೆ ಇದಕ್ಕೆ ಸೂಕ್ತ ಬೆಲೆ ತೆರುವುದು ಖಂಡಿತ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಯನ್ನು ಮನ್ನಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆಯದೆ ಹೋದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯವೇ ಬಿಜೆಪಿ ಸರಕಾರವನ್ನು ಕಿತ್ತೆಸೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now