
ಉಡುಪಿ ಜಿಲ್ಲೆ, ಕಾರ್ಕಳ ಉಪ ವಿಭಾಗದ ಶಿರ್ವ ಪೊಲೀಸ್ ಠಾಣೆಗೆ ಅಪರೂಪದ ಗೌರವ ಸಂದಿದೆ. 2026ನೇ ಸಾಲಿಗೆ ಮಾನ್ಯ ಐಜಿಪಿ, ಪಶ್ಚಿಮ ವಲಯ ಮಂಗಳೂರು ಇವರು ಇಡೀ ವಲಯದಲ್ಲೇ ಒಂದು ಠಾಣೆಯನ್ನು “ಮಾದರಿ ಪೊಲೀಸ್ ಠಾಣೆ”ಯಾಗಿ ಆಯ್ಕೆ ಮಾಡುವ ಯೋಜನೆಯಲ್ಲಿ ಶಿರ್ವ ಠಾಣೆಯನ್ನು ಆರಿಸಿದ್ದಾರೆ. ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯ್ಕ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.
ಶಿರ್ವ ಠಾಣೆಯ ಕಾರ್ಯವೈಖರಿ, ಸಾರ್ವಜನಿಕ ಸ್ನೇಹಿ ವರ್ತನೆ ಮತ್ತು ಅಪರಾಧ ನಿಯಂತ್ರಣದಲ್ಲಿನ ಸಾಧನೆ ಪರಿಗಣಿಸಿ ಈ ಮನ್ನಣೆ ನೀಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಠಾಣೆಯು ದೂರು ವಿಲೇವಾರಿ, ಮಹಿಳೆ ಮತ್ತು ಮಕ್ಕಳ ರಕ್ಷಣೆ, ಸಂಚಾರ ನಿಯಂತ್ರಣ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದೆ. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸಿಬ್ಬಂದಿ ಗೌರವಯುತವಾಗಿ ವರ್ತಿಸುವುದು, ತ್ವರಿತ ಸ್ಪಂದನೆ ನೀಡುವುದು ಇಲ್ಲಿನ ವಿಶೇಷತೆ ಎಂದು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಪ್ರಧಾನ ಕಚೇರಿ ಸುತ್ತೋಲೆ 30/12/2025ರ ಅನ್ವಯ, ಎಲ್ಲಾ ಮಾದರಿ ಠಾಣೆಗಳು ಪೊಲೀಸ್ ವೃತ್ತ ನಿರೀಕ್ಷಕರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕು. ಅದರಂತೆ ಶಿರ್ವ ಠಾಣೆಯನ್ನು ಈಗ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ದಾಖಲೆಗಳ ಡಿಜಿಟಲೀಕರಣ, ಸಿಸಿಟಿವಿ ಕಣ್ಗಾವಲು ಬಲಪಡಿಸುವುದು, ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವುದು ಈ ಯೋಜನೆಯ ಭಾಗವಾಗಿದೆ. ಇದರಿಂದ ಠಾಣೆಯ ಕಾರ್ಯಕ್ಷಮತೆ ರಾಜ್ಯಕ್ಕೆ ಮಾದರಿಯಾಗಲಿದೆ.
ಈ ಆಯ್ಕೆಯಿಂದ ಶಿರ್ವ ಭಾಗದ ಜನರಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆ ಇಮ್ಮಡಿಯಾಗಿದೆ. ಸ್ಥಳೀಯ ನಾಗರಿಕರು “ನಮ್ಮ ಠಾಣೆಯ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಜನರ ಸೇವೆಗೆ ನಿಂತಿದ್ದಾರೆ. ಅಪರಾಧ ಮುಕ್ತ ಸಮಾಜಕ್ಕೆ ಅವರ ಶ್ರಮ ದೊಡ್ಡದು” ಎಂದು ಎಸ್ ಐ ಮಂಜುನಾಥ ಮರಬದ, ಕ್ರೈಂ ಎಸ್ ಐ ಲೋಹಿತ್ ಕುಮಾರ್ ಹಾಗೂ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿ ಸಂಘಟನೆಗಳು ಕೂಡ ರಾತ್ರಿ ಗಸ್ತು ಮತ್ತು ಭದ್ರತಾ ಕ್ರಮಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿವೆ.
ಮಾದರಿ ಠಾಣೆಯಾಗಿ ಆಯ್ಕೆಯಾದ ಬೆನ್ನಲ್ಲೇ ಶಿರ್ವ ಪೊಲೀಸ್ ಠಾಣೆಯ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಈ ಠಾಣೆಯನ್ನು ಇತರೆ ಠಾಣೆಗಳಿಗೆ ಮಾದರಿಯಾಗಿ ರೂಪಿಸುವ ಗುರಿ ಹೊಂದಿದೆ. ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಕೈಜೋಡಿಸಿ
ಸಹಕರಿಸಿದರೆ, ಶಿರ್ವ ನಿಜಕ್ಕೂ ರಾಜ್ಯದ “ಮಾದರಿ” ಆಗುವುದರಲ್ಲಿ ಸಂಶಯವಿಲ್ಲ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now