
ಶಿರ್ವ, ಆ. 07: ಸಾಯಂಕಾಲ ಸುಮಾರು 7.10 ಕ್ಕೆ
ಶಿರ್ವ ಪೇಟೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ಶುಕ್ರವಾರ (ಆ. 07) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಶಿರ್ವ ಚಕ್ಪಾದೆ ನಿವಾಸಿ ಪ್ರಕಾಶ್ ಆಚಾರ್ಯ (55) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಆಗಸ್ಟ್ 7ರಂದು ಸುಮಾರು 7.10ರ ವೇಳೆಗೆ ಬೆಲ್ಮಣ್ ಕಡೆಯಿಂದ ಶಿರ್ವದ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರಿನ (KA 20 Z 2883) ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಇದೇ ವೇಳೆ ಕುತ್ತ್ಯಾರು-ಶಿರ್ವ ಮಿಲ್ ರಸ್ತೆಯಿಂದ ಬಂದು ರಸ್ತೆ ದಾಟುತ್ತಿದ್ದ ಪ್ರಕಾಶ್ ಆಚಾರ್ಯ ಅವರ ಸ್ಕೂಟಿಗೆ (KA 20 E 1460) ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸವಾರ ಪ್ರಕಾಶ್ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು.
ಸಾರ್ವಜನಿಕರ ಸ್ಪಂದನೆ ಹಾಗೂ ಸಾವು:
ಅಪಘಾತ ನಡೆದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ರಕ್ಷಿಸಿ, ಶಿರ್ವ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಆಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು:
ಅಪಘಾತದ ಮಾಹಿತಿ ತಿಳಿದ ಕೂಡಲೇ ಶಿರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now