ಸುಜ್ಞಾನ ಕಾಲೇಜಿನಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ,ಮೊಬೈಲ್ ಚಟಕ್ಕೆ ಬಲಿಯಾಗಬೇಡಿ ; ಪವನ್‌ ಕುಮಾರ್ ಎಂ.

ಸುಜ್ಞಾನ ಕಾಲೇಜಿನಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ,ಮೊಬೈಲ್ ಚಟಕ್ಕೆ ಬಲಿಯಾಗಬೇಡಿ ; ಪವನ್‌ ಕುಮಾರ್ ಎಂ.
0Shares

ಕುಂದಾಪುರ: ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂದಿನ ಯುವಜನತೆ ಮೊಬೈಲ್ ಚಟಕ್ಕೆ ಬಿದ್ದು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಸೋಶಿಯಲ್ ಮೀಡಿಯಾಗಳ ಹುಸಿ ಆಕರ್ಷಣೆಗೆ ಒಳಗಾಗಿ ಬಲಿಬೀಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಜಗತ್ತಿನ ಅಪಾಯಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್‌ ಕಾನ್‌ ಸ್ಟೇಬಲ್ ಪವನ್‌ ಕುಮಾರ್ ಎಂ ಹೇಳಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆ ಇವುಗಳ ಜಂಟಿ ಸಹಯೋಗದೊಂದಿಗೆ ಯಡಾಡಿ ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಇತ್ತೀಚಿನ ಸೈಬರ್‌ ಅಪರಾಧಗಳ ಪ್ರವೃತ್ತಿಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು”ಎಂಬ ಸೈಬರ್ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೈಬರ್ ಅಪರಾಧಗಳ ಜಾಲ ಮತ್ತು ಅದರಿಂದ ಪಾರಾಗುವ ಮಾರ್ಗಗಳ ಕುರಿತು ವಿದ್ಯಾರ್ಥಿಗಳಿಗೆ ಕೂಲಂಕುಷ ಮಾಹಿತಿ ನೀಡಿದ ಪವನ್ ಕುಮಾರ್‌ ಎಂ, “ಇತ್ತೀಚಿನ ದಿನಗಳಲ್ಲಿ ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದು ಎನ್ನುವ ‘ಆನ್‌ಲೈನ್ ಉದ್ಯೋಗದ ಆಮಿಷ’, ಸುಲಭ ಕಂತುಗಳಲ್ಲಿ ತಕ್ಷಣ ಹಣ ನೀಡುವ ‘ಸಾಲದ ಅಪ್ಲಿಕೇಶನ್‌ಗಳು’ ಹಾಗೂ ದಿಢೀರ್ ಶ್ರೀಮಂತರಾಗುವ ‘ಹೂಡಿಕೆ ಆಮಿಷಗಳು’ ಹೆಚ್ಚಾಗಿ ಜನರನ್ನು ಮರಳು ಮಾಡುತ್ತಿವೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು, ಒಟಿಪಿ (OTP) ಮತ್ತು ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದು ಅತ್ಯಂತ ಅಪಾಯಕಾರಿ. ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು ಎಂದು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು, “ವಿದ್ಯಾರ್ಥಿ ಜೀವನ ಎಂಬುದು ವ್ಯಕ್ತಿತ್ವ ರೂಪಿಸಿಕೊಳ್ಳುವ ಅತ್ಯಂತ ಅಮೂಲ್ಯವಾದ ಕಾಲಘಟ್ಟ. ಈ ವಯಸ್ಸಿನಲ್ಲಿ ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಹಾಗೂ ಕಲಿಕೆಗೆ ಮಾತ್ರ ಬಳಸಿಕೊಳ್ಳಬೇಕೇ ಹೊರತು, ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾಗಳ ಗೀಳಿಗೆ ಬಿದ್ದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ನಿಮ್ಮ ಭವಿಷ್ಯಕ್ಕೆ ಯಾವುದು ಮುಖ್ಯ, ಯಾವುದು ಗೌಣ ಎನ್ನುವುದನ್ನು ವಿವೇಚಿಸುವ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ. ಸಾಮಾಜಿಕ ಜಾಲತಾಣಗಳ ಕೃತಕ ಜಗತ್ತಿಗಿಂತ ನೈಜ ಅಧ್ಯಯನ ಮತ್ತು ಗುರಿ ತಲುಪುವತ್ತ ಹೆಚ್ಚಿನ ಗಮನ ಹರಿಸಿ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, “ಸೋಶಿಯಲ್ ಮೀಡಿಯಾಗಳ ವ್ಯಸನಕ್ಕೆ ಸಿಲುಕಿ ನಿಮ್ಮ ಉಜ್ವಲ ಬದುಕನ್ನು ಹಾಳುಮಾಡಿಕೊಳ್ಳಬೇಡಿ. ಸಾಮಾಜಿಕ ಜಾಲತಾಣಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ; ಬದಲಾಗಿ ಉತ್ತಮ ಉದ್ದೇಶಕ್ಕಾಗಿ, ಜ್ಞಾನವರ್ಧನೆಗಾಗಿ ಮಾತ್ರ ನೀವು ತಂತ್ರಜ್ಞಾನವನ್ನು ಬಳಸಿ,” ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲರಾದ ರಂಜನ್ ಶೆಟ್ಟಿ ಉಪಸ್ಥಿತರಿದ್ದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now