
ದಿನಾಂಕ:07.08.2026 ರಂದು 15:45 ಗಂಟೆಗೆ ಕಾಪು ತಾಲೂಕು ಮುದರಂಗಡಿ ಎಂಬಲ್ಲಿರುವ ಸೆಂಟ್ ಕ್ಷೇವಿಯರ್ ಚರ್ಚ್ನ ಕಾಂಪ್ಲೆಕ್ಸ್ನಲ್ಲಿ ಡೇವಿಡ್ ಡಿಸೋಜಾ ಎಂಬುವರು ಪ್ರಿನ್ಸ್ ಎಂಟರ್ಪ್ರೈಸಸ್ ಎಂಬ ಹೆಸರಿನ ಉದ್ಯಮದ ಕಚೇರಿಯನ್ನು ಹೊಂದಿದ್ದು, ಕಚೇರಿಗೆ ಬಂದು ಬಳಿಕ ತನ್ನ ಥಾರ್ ವಾಹನದ ಚಾಲಕನ ಬದಿಯ ಬಾಗಿಲ ಬಳಿ ವಾಪಾಸು ಹೋದಾಗ ಅಪರಿಚಿತ ಆರೋಪಿತರು ಡೇವಿಡ್ ಡಿಸೋಜಾರವರನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿನಲ್ಲಿ ಬಂದು ಅವರ ಪೈಕಿ ಒಬ್ಬನು ಪಿಸ್ತೂಲ್ ನಿಂದ ಯಾವುದೋ ಕಾರಣಕ್ಕೆ ದ್ವೇಷಗೊಂಡು ಡೇವಿಡ್ ಡಿಸೋಜಾರವರ ತಲೆಗೆ ಗುಂಡನ್ನು ಹಾರಿಸಿದ್ದು, ತೀವೃ ಗಾಯಗೊಂಡ ಡೇವಿಡ್ ಡಿಸೋಜಾರವರನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಡೇವಿಡ್ ಡಿಸೋಜಾರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 66/2026 ಕಲಂ:103, 3(5),ಬಿಎನ್ಎಸ್ & 3, 25 Arms act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯದ ತನಿಖೆಯಲ್ಲಿರುವ ಸಮಯ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ 3 ಜನ ಆರೋಪಿತರು ಬಸ್ಸಿನಲ್ಲಿ ಭಟ್ಕಳ ಕಡೆಗೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಆರೋಪಿತರು ಹೋಗುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ನಿಲ್ಲಿಸಿ ಪೊಲೀಸ್ ತಂಡವು ತಪಾಸಣೆ ನಡೆಸುವ ಸಮಯ ಬಸ್ಸಿನಲಿದ್ದ 3 ಜನ ಆರೋಪಿತರು ಬಸ್ಸಿನಿಂದ ಇಳಿದು ಓಡಿಹೋಗುತ್ತಿದ್ದಾಗ, ಅವರನ್ನು ಬೆನ್ನಟ್ಟಿ ಹಿಡಿಯುವ ಸಮಯ ಆರೋಪಿತರ ಪೈಕಿ ಓರ್ವ ಆರೋಪಿಯಾದ ರಾಜು, ಪ್ರಾಯ 42 ವರ್ಷ, ಥಾಣಾ ಪಿಲ್ವ, ಉತ್ತರ ಪ್ರದೇಶ, ಈತನು ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಇವರನ್ನು ದೂಡಿ ಹಾಕಿ, ಆತನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಓಡಿ ಹೋಗುವಾಗ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದು, ಈತನು ಡೇವಿಡ್ ಡಿಸೋಜಾ ಈತನಿಗೆ ತನ್ನ ಪಿಸ್ತೂಲಿನಿಂದ ಗುಂಡು ಹಾರಿ ಕೊಲೆ ಮಾಡಿದ ಆರೋಪಿಯಾಗಿರುತ್ತಾನೆ. ಈತನು ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಇನ್ನಿಬ್ಬರು ಪರಾರಿಯಾದ ಆರೋಪಿತರಾದ ಅಜಯ್ ರಸ್ತೋಗಿ @ ಅನ್ಮೋಲ್, ಪ್ರಾಯ 23 ವರ್ಷ, ಉತ್ತರಖಾಂಡ ಈತನನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಮತ್ತು ಜಿಯಾಹುಲ್ ವಜೂಲ್ ಶೇಖ್ @ ದೀಪಕ್, ಪ್ರಾಯ 38 ವರ್ಷ, ಬಿಹಾರ ರಾಜ್ಯ ಈತನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಈ ದಿನ ಬೆಳಗ್ಗೆ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಲಾಗಿದೆ.
ಆರೋಪಿತರನ್ನು ವಶಕ್ಕೆ ಪಡೆಯುವ ಸಮಯ ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಇವರಿಗೆ ಗಾಯವಾಗಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಗಾಯಗೊಂಡ ಆರೋಪಿಯು ಕೂಡಾ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾನೆ.
ಆರೋಪಿತರು ಕೃತ್ಯ ನಡೆಸಲು ಉಪಯೋಗಿಸಿ, ಎರ್ಮಾಲ್ ನಲ್ಲಿ ಬಿಟ್ಟು ಹೋಗಿದ್ದ ಮೋಟಾರು ಸೈಕಲನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.
ಈ ಕೃತ್ಯಕ್ಕೆ ಮೃತ ಡೇವಿಡ್ ಡಿಸೋಜಾ ಈತನು ನಡೆಸುತ್ತಿದ್ದ ಕಾಮಗಾರಿಗೆ ಸಂಬಂದಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಡೇವಿಡ್ ಇವರನ್ನು ಕೊಲೆ ಮಾಡಲು ಸುಫಾರಿ ನೀಡಿದ್ದು, ಈ ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರನ್ನು ಪತ್ತೆ ಹಚ್ಚಲು ಬಾಕಿ ಇರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬೆಳ್ಳಿಯಪ್ಪ, ಇವರ ನೇತ್ರತ್ವದಲ್ಲಿ, ಕಾಪು ವೃತ್ತ ನಿರೀಕ್ಷಕರಾದ ಅಝ್ಮತ್ ಆಲಿ ಜಿ, ಡಿ.ಎಸ್.ಬಿ. ವಿಭಾಗದ ಪಿ.ಐ. ಹರೀಶ್, ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ಬೈಂದೂರು ಪಿ.ಎಸ್.ಐ. ಮಹೇಶ್, ಕಾಪು ಪಿ.ಎಸ್.ಐ. ತೇಜಸ್ವಿ, ಶಿರ್ವ ಪಿ.ಎಸ್. ಮಂಜುನಾಥ ಮರಬದ, ಕೊಲ್ಲೂರು ಪಿ.ಎಸ್. ಐ. ವಿನಯ್, ಕಾರ್ಕಳ ಗ್ರಾಮಾಂತರ ಪಿ.ಎಸ್.ಐ. ಪ್ರಸನ್ನ ಎಂ.ಎಸ್. ಪಡುಬಿದ್ರಿ ಪಿ.ಎಸ್.ಐ. ಶಕ್ತಿವೇಲು ಹಾಗೂ ಅನಿಲ್, ಶಿರ್ವ ಪಿ.ಎಸ್.ಐ. ಲೋಹಿತ್ ಕುಮಾರ್, ಪ್ರೊಬೆಷನರಿ ಪಿ.ಎಸ್.ಐ. ಶಿಫಾಝ್, ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿಯವರು, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಇವರು ಯಶಸ್ವಿಯಾಗಿ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now