
ಉಡುಪಿ, ಮೇ 1:ಗೌತಮ ಬುದ್ಧರು ಉತ್ತಮ ಬದುಕನ್ನು ರೂಪಿಸಲು ಅವಶ್ಯವಿರುವ ಸಂದೇಶವನ್ನು ನೀಡಿದವರು, ಇಂದಿನ ಕಾಲದಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳನ್ನು ತಡೆಗಟ್ಟಿ ಸಮಾಜದಲ್ಲಿರುವ ಅಹಿಂಸೆ ಅಸಮಾನತೆ ಮೌಢ್ಯಗಳನ್ನು ದೂರಗೊಳಿಸಿ, ಸಮಾಜವನ್ನು ಒಗ್ಗೂಡಿಸುವಲ್ಲಿ ಬುದ್ಧರ ಅಹಿಂಸೆ ಸತ್ಯದ ಸಂದೇಶಗಳು ಸಹಕಾರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.
ಅವರು ಇಂದು ಜನತಾ ಸಭಾಭವನ, ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ, ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಗವಾನ್ ಬುದ್ಧ ರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.
ಗೌತಮ ಬುದ್ಧರು ಜಗತ್ತಿಗೆ ಶಾಂತಿ, ಸಮಾನತೆ, ಪ್ರೀತಿ ಮತ್ತು ಕರುಣೆಯ ಮಾರ್ಗವನ್ನು ಬೋಧಿಸಿದವರು. ಅವರ ವಿಚಾರಧಾರೆಗಳೂ ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದ ಅವರು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬುದ್ಧರ ಚಿಂತನೆ ಅಗತ್ಯವಿದೆ ಎಂದರು.
ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಬೆಂಗಳೂರು ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಮಾನವೀಯ ಮೌಲ್ಯಗಳು ಕಳೆದು ಕೊಂಡ ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳನ್ನು ಬಿತ್ತರಿಸುವ ಬುದ್ಧನ ಸಂದೇಶಗಳು ಅವಶ್ಯಕವಾಗಿದೆ. ಮನುಷ್ಯನ ಬದುಕು ಸತ್ಯದ ಹಾದಿಯಲ್ಲಿರಬೇಕು ಎಂದು ತಿಳಿಸಿಕೊಟ್ಟ ಬುದ್ಧರ ಸಂದೇಶವನ್ನು ಪಾಲಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಗೌತಮ ಬುದ್ಧರ ಚಿಂತನೆಯಂತೆ ನಮ್ಮನು ನಾವು ಅರಿತು ಜ್ಞಾನ ಮಾರ್ಗದಲ್ಲಿ ನಡೆದಾಗ ಜಗತ್ತಿನಲ್ಲಿ ಶಾಂತಿ ಸಹೋದರತ್ವ ನೆಲೆಸಲು ಸಾಧ್ಯ ಎಂದರು.
ಬೌದ್ಧ ಚಿಂತಕ ರಮೇಶ್ ರಘುರಾಮ ಭಗವಾನ್ ಬುದ್ಧ ರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದುಕೊಳ್ಳಬೇಕು. ಬುದ್ಧನ ತತ್ತ ್ವಗಳು ಬಸವಣ್ಣನ ಮೇಲೆ ಅಗಾಧವಾದ ಪ್ರಭಾವ ಬೀರಿದೆ. ಭೇದ, ಭಾವ ಮಾಡುವವರು ಅಜ್ಞಾನಿಗಳು. ಮಾನವನ ಘನತೆಯನ್ನು ಎತ್ತಿ ಹಿಡಿಯುವ ಧರ್ಮವೇ ನಿಜವಾದ ಧರ್ಮವಾಗಿದೆ ಎಂದು ಪ್ರತಿಪಾದಿಸಿದ ಬುದ್ಧನ ಸಿದ್ದಾಂತವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಅಧ್ಯಕ್ಷ ಅಜೆಯ್ ಕುಮಾರ್ ಎಸ್, ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ ಎಸ್, ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಸದಸ್ಯರು, ಭಗವಾನ್ ಬುದ್ಧ ತತ್ವ ಅನುಯಾಯಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ವರ್ಷಾ ಬಿ ಕೋಟ್ಯಾನ್ ನಿರೂಪಿಸಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now