ಸಿಕ್ಕಿಂನಲ್ಲಿ ಭಾರಿ ಮಳೆಗೆ ಭೂಕುಸಿತ: ಹಲವು ಮನೆಗಳಿಗೆ ಹಾನಿ

ಸಿಕ್ಕಿಂನಲ್ಲಿ ಭಾರಿ ಮಳೆಗೆ ಭೂಕುಸಿತ: ಹಲವು ಮನೆಗಳಿಗೆ ಹಾನಿ
0Shares

ಗ್ಯಾಂಗ್ಟಕ್: ಸಿಕ್ಕಿಂನಲ್ಲಿ ಕಳೆದ 24 ಗಂಟೆಗಳಿಂದ

ಸುರಿಯುತ್ತಿರುವ ಭಾರಿ ಮಳೆಯಿಂದ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಇದೇ ವೇಳೆ, ಪರ್ವತ ರಾಜ್ಯದಲ್ಲಿ ಗುರುವಾರ ಈ ಋತುವಿನ ಮೊದಲ ಹಿಮಪಾತವೂ ವರದಿಯಾಗಿದೆ.

ಪಶ್ಚಿಮ ಸಿಕ್ಕಿಂನ ಗ್ಯಾಲ್ಕಿಂಗ್ ಜಿಲ್ಲೆ ರಿಂಬಿ ಪ್ರದೇಶದಲ್ಲಿ ಬುಧವಾರ ರಾತ್ರಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. ಶುಕ್ರವಾರದಿಂದ ಈ ಪ್ರದೇಶದಲ್ಲಿ ಪದೇಪದೇ ಭೂಕುಸಿತ ಸಂಭವಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಿಕ್ಕಿಂ ಸರ್ಕಾರ ಕಳೆದ ವಾರ ಸಿಂಗ್ಲಿಟಾಮ್-ರಿಂಬಿ ಪ್ರದೇಶದ 35 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು.

ದೇಶದ ಇತರ ಭಾಗಗಳೊಂದಿಗೆ ಸಿಕ್ಕಿಂ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾದ ಎನ್‌ಎಚ್-10ರ ರಾಂಗ್-ಗ್ಯಾಂಗ್ಟಕ್ ಮಾರ್ಗದಲ್ಲೂ ಸಂಚಾರಕ್ಕೆ ಅಡ್ಡಿಯಾಗಿದೆ. ಗ್ಯಾಂಗ್ಟಕ್‌ನಿಂದ ಸುಮಾರು 35 ಕಿ.ಮೀ. ದೂರದ ಬರ್ಡಾಂಗ್‌ನ 20ನೇ ಮೈಲಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಹೆದ್ದಾರಿ ಬಂದ್ ಆಗಿದೆ. ಮಣ್ಣು, ಬಂಡೆಗಳು ಹಾಗೂ ಅವಶೇಷಗಳು ರಸ್ತೆಗೆ ಉರುಳಿ ಬೀಳುತ್ತಿದ್ದು, ಸಂಚಾರವನ್ನು ಪರ್ಯಾಯ ಮಾರ್ಗಗಳ ಮೂಲಕ ತಿರುಗಿಸಲಾಗಿದೆ.

ಉತ್ತರ ಸಿಕ್ಕಿಂನ ಝೀರೋ ಪಾಯಿಂಟ್ ಹಾಗೂ ಪೂರ್ವ ಸಿಕ್ಕಿಂನ ತ್ತೊಮೊಗೊ (ಚಾಂಗು) ಸರೋವರ ಪ್ರದೇಶದಲ್ಲಿ ಗುರುವಾರ ಈ ಋತುವಿನ ಮೊದಲ ಹಿಮಪಾತ ದಾಖಲಾಗಿದೆ. ಝೀರೋ ಪಾಯಿಂಟ್ ಗ್ಯಾಂಗ್ಟಕ್‌ನಿಂದ ಸುಮಾರು 160 ಕಿ.ಮೀ. ದೂರದಲ್ಲಿದ್ದರೆ, ಚಾಂಗು ಸರೋವರ ರಾಜ್ಯ ರಾಜಧಾನಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ.

“ಗುರುವಾರ ಬೆಳಗ್ಗೆಯಿಂದ ಉತ್ತರ ಸಿಕ್ಕಿಂನ ಝೀರೋ ಪಾಯಿಂಟ್ ಮತ್ತು ಚಾಂಗು ಪ್ರದೇಶದಲ್ಲಿ ಹಿಮಪಾತ ವರದಿಯಾಗಿದೆ” ಎಂದು ಲಚುಂಗ್‌ನ ಹೋಟೆಲ್ ಉದ್ಯಮಿ ಹಾಗೂ ಈಸ್ಟರ್ನ್ ಹಿಮಾಲಯನ್ ಟ್ರಾವೆಲ್ ಆ್ಯಂಡ್ ಟೂ‌ರ್ ಆಪರೇಟರ್ಸ್ ಅಸೋಸಿಯೇಷನ್ ಸದಸ್ಯ ಕಲ್ಪಕ್ ಡೇ ತಿಳಿಸಿದ್ದಾರೆ.

ಬುಧವಾರ ರಾತ್ರಿ ಆರಂಭವಾದ ನಿರಂತರ ಮಳೆಯಿಂದ ಬಂಗಾಳದ ಬೆಟ್ಟ ಪ್ರದೇಶಗಳು, ಸಿಲಿಗುರಿ ಹಾಗೂ ಸುತ್ತಮುತ್ತಲಿನ ಬಯಲು ಪ್ರದೇಶಗಳು ತತ್ತರಿಸಿವೆ. ಗುರುವಾರ ಮುಂಜಾನೆ ಟೀಸ್ತಾ ನದಿಯ ನೀರಿನ ಮಟ್ಟ ಸುಮಾರು 145 ಮೀಟರ್‌ಗೆ ಏರಿಕೆಯಾಗಿದ್ದು, 150 ಮೀಟರ್‌ನ ಅಪಾಯದ ಮಟ್ಟಕ್ಕಿಂತ ತುಸು ಕೆಳಗಿತ್ತು.

ಸಿಲಿಗುರಿಯ ಮಹಾತ್ಮ ಗಾಂಧಿ ಚೌಕ್ ಬಳಿಯ ಮಹಾನಂದಾ ನದಿಯ ನೀರಿನ ಮಟ್ಟವೂ ಸುಮಾರು 113 ಮೀಟರ್‌ಗೆ ಏರಿಕೆಯಾಗಿದ್ದು, 116 ಮೀಟರ್‌ನ ಅಪಾಯದ ಮಟ್ಟವನ್ನು ಸಮೀಪಿಸಿದೆ.

ಭಾರಿ ಮಳೆಯ ಸಂದರ್ಭದಲ್ಲಿ ಪ್ರಯಾಣವನ್ನು ತಪ್ಪಿಸುವಂತೆ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಇಳಿಜಾರು ಪ್ರದೇಶಗಳು, ಅಸ್ಥಿರ ಗುಡ್ಡ ರಸ್ತೆಗಳು ಮತ್ತು ಇತರ ಅಪಾಯಕಾರಿ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ದಾರ್ಜಿಲಿಂಗ್ ಜಿಲ್ಲಾಡಳಿತ ಸೂಚಿಸಿದೆ.

ಗುಡುಗು, ಬಿರುಗಾಳಿ ಸಂದರ್ಭದಲ್ಲಿ ಮರಗಳು, ವಿದ್ಯುತ್ ಕಂಬಗಳು ಮತ್ತು ತಾತ್ಕಾಲಿಕ ನಿರ್ಮಾಣಗಳಿಂದ ದೂರ ಇರುವಂತೆ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಸಲಹೆ ನೀಡಲಾಗಿದೆ. ಉಕ್ಕಿ ಹರಿಯುತ್ತಿರುವ ಹಳ್ಳಗಳು ಅಥವಾ ನೀರು ನಿಂತಿರುವ ರಸ್ತೆಗಳನ್ನು ದಾಟಲು ಪ್ರಯತ್ನಿಸದಂತೆಯೂ ಎಚ್ಚರಿಕೆ ನೀಡಲಾಗಿದೆ.

”ಪ್ರವಾಸಿಗರು ಹಾಗೂ ಸಂದರ್ಶಕರು ತಮ್ಮ ಪ್ರಯಾಣವನ್ನು ಎಚ್ಚರಿಕೆಯಿಂದ ಯೋಜಿಸಬೇಕು. ಭಾರಿ ಮಳೆಯ ಸಂದರ್ಭದಲ್ಲಿ ಪ್ರಯಾಣವನ್ನು ತಪ್ಪಿಸಬೇಕು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now