
ಉಡುಪಿ, ಜು.22: ಉಡುಪಿ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ–66ರ ಉಡುಪಿಯಿಂದ ಬ್ರಹ್ಮಾವರ ಕಡೆ ಸಾಗುವ ಸರ್ವಿಸ್ ರಸ್ತೆಗೆ ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಮೂರು ಗಂಟೆಗಳಿಗೂ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಘಟನೆ ನಡೆದ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸದೇ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಮರ ರಸ್ತೆಯ ಮಧ್ಯೆ ಅಡ್ಡವಾಗಿ ಬಿದ್ದ ಪರಿಣಾಮ ಎರಡೂ ದಿಕ್ಕಿನ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ದಳ, ನಗರಸಭೆ, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ ತುರ್ತು ಸ್ಪಂದನೆ ನೀಡಿದ್ದು ಅಗ್ನಿಶಾಮಕ ದಳ ಮಾತ್ರ ಎನ್ನಲಾಗಿದೆ.
ಅಗ್ನಿಶಾಮಕ ದಳದ ನಾಲ್ಕೈದು ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದರು. ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕವೇ ವಾಹನ ಸಂಚಾರವನ್ನು ಪುನರಾರಂಭಿಸಲಾಯಿತು. ನಂತರ ಹೆದ್ದಾರಿ ಪ್ರಾಧಿಕಾರ, ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಅವರ ವಿಳಂಬದ ನಡೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, “ಮಳೆಗಾಲದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿದೆ. ಜಿಲ್ಲಾಧಿಕಾರಿಗಳು ಕೂಡ ಎಲ್ಲ ಇಲಾಖೆಗಳು ತುರ್ತು ಸಂದರ್ಭಗಳಲ್ಲಿ ಕೂಡಲೇ ಸ್ಪಂದಿಸುವಂತೆ ಸೂಚನೆ ನೀಡಿದ್ದರೂ, ಬೆಳಗ್ಗಿನಿಂದ ನಿರಂತರ ಕರೆ ಮಾಡಿದರೂ ಕೆಲವು ಅಧಿಕಾರಿಗಳು ದೂರವಾಣಿ ಸ್ವೀಕರಿಸಲಿಲ್ಲ. ಅಗ್ನಿಶಾಮಕ ದಳ ಮಾತ್ರ ತಕ್ಷಣ ಸ್ಥಳಕ್ಕೆ ಧಾವಿಸಿ ಕರ್ತವ್ಯ ನಿರ್ವಹಿಸಿದೆ. ಆದರೆ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ಬೇಸರದ ಸಂಗತಿ,” ಎಂದು ಆರೋಪಿಸಿದರು.
“ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಸದಾ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿದ್ದು, ಅಧಿಕಾರಿಗಳ ಇಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಭವಿಷ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ಎಲ್ಲ ಇಲಾಖೆಗಳೂ ಜವಾಬ್ದಾರಿಯುತವಾಗಿ ಮತ್ತು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು,” ಎಂದು ಅವರು ಎಚ್ಚರಿಕೆ ನೀಡಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now