
ಮಂಗಳೂರು: ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಧಾರ್ಮಿಕತೆಯೊಂದಿಗೆ ತುಳುನಾಡಿನ ವೈದ್ಯ ಪರಂಪರೆಯ ಮೂಲ ಜನಾಂಗವಾದ ಬಿಲ್ಲವ ಸಮುದಾಯದ ಆಯುರ್ವೇದ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಗಳು ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಶ್ರೀ ಕ್ಷೇತ್ರದ ಮಹಾಪೋಷಕರು, ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷರು ಹಾಗೂ ಗುಜರಾತಿನ ಉದ್ಯಮಿಯಾದ ದಯಾನಂದ ಬೊಂಟ್ರ ಹೇಳಿದರು.
ನಗರದ ಹೋಟೆಲ್ ದೀಪ ಕಂಫರ್ಟ್ನಲ್ಲಿ ನಡೆದ ಬಿಲ್ಲವ ಸಮಾಜದ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಆಯುರ್ವೇದ ಕ್ಲಿನಿಕ್, ಆಯುರ್ವೇದ ಫಾರ್ಮಸಿ, ಆಯುರ್ವೇದ ಉತ್ಪನ್ನಗಳ ತಯಾರಿಕಾ ಘಟಕ, ಯೋಗ ಕೇಂದ್ರ, ಪಂಚಕರ್ಮ ಕೇಂದ್ರ ಹಾಗೂ ಔಷಧೀಯ ಸಸ್ಯಗಳ ವನ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಎರಡನೇ ಹಂತದಲ್ಲಿ ಆಯುರ್ವೇದ ಆಸ್ಪತ್ರೆ, ಆಯುರ್ವೇದ ವೈದ್ಯಕೀಯ ಕಾಲೇಜು, ಔಷಧೀಯ ಸಸ್ಯಗಳ ಸಂಶೋಧನಾ ಕೇಂದ್ರ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಆಯುರ್ವೇದ ಕೇಂದ್ರ ಹಾಗೂ ಯಾತ್ರಿ ನಿವಾಸದ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಬಿಲ್ಲವ ಸಮಾಜದ ಉದ್ಯಮಿಗಳು ಹಾಗೂ ದಾನಿಗಳು ಉದಾರವಾಗಿ ಸಹಕಾರ ನೀಡುತ್ತಿದ್ದು,ಈ ಬೃಹತ್ ಯೋಜನೆ ಪೂರ್ಣಗೊಳ್ಳಲು ಇನ್ನಷ್ಟು ನೆರವು ಅಗತ್ಯವಿದೆ. ಬಿಲ್ಲವ ಸಮಾಜದ ಔಷಧೀಯ ಸಸ್ಯ ಹಾಗೂ ವೈದ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಮಾಜದ ಒಗ್ಗಟ್ಟಿನ ಬೆಂಬಲ ಅತ್ಯಗತ್ಯ ಎಂದು ಅವರು ಕರೆ ನೀಡಿದರು.
ಮಹಾರಾಷ್ಟ್ರದ ನಾಸಿಕ್ನ ಉದ್ಯಮಿ ಗಂಗಾಧರ ಅಮೀನ್ ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಇಂತಹ ಮಹತ್ವದ ಯೋಜನೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಸಭೆಯ ಪ್ರಾಸ್ತಾವಿಕ ಭಾಷಣದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಮಾತನಾಡಿ, ಶ್ರೀ ಕ್ಷೇತ್ರವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಆರೋಗ್ಯ, ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಆಯುರ್ವೇದ ಕೇಂದ್ರದ ಸ್ಥಾಪನೆಯ ಮೂಲಕ ಬಿಲ್ಲವ ಸಮಾಜದ ವೈದ್ಯ ಪರಂಪರೆಗೆ ಹೊಸ ಆಯಾಮ ದೊರೆಯಲಿದ್ದು, ಸಮಾಜದ ಸೇವೆಗೆ ಇದು ಮಹತ್ತರ ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಬಿರ್ವ ಮಾತನಾಡಿ, ದೇಶ-ವಿದೇಶಗಳಲ್ಲಿ ನೆಲೆಸಿರುವ ದಾನಿಗಳ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಸಾಗುತ್ತಿವೆ. ಆದರೆ ಈ ಯೋಜನೆಗಳಿಗೆ ಸರ್ಕಾರದಿಂದ ಇನ್ನೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರವೂ ಅಗತ್ಯವಾಗಿದ್ದು, ಈ ಕುರಿತು ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಶ್ರೀ ಕ್ಷೇತ್ರದ ಇಂದಿನ ಅಭಿವೃದ್ಧಿಯ ಹಿಂದೆ ಬಿಲ್ಲವ ಸಮಾಜದ ಸಕಾರಾತ್ಮಕ ಸ್ಪಂದನೆ ಹಾಗೂ ಕ್ಷೇತ್ರಾಡಳಿತ ಸಮಿತಿಯ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಟ್ರಸ್ಟಿ ಹಾಗೂ ಮಾರ್ಗದರ್ಶಿ ಚಿತ್ತರಂಜನ್ ಕಂಕನಾಡಿ, ಗೌರವಾಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮಹಾಪೋಷಕರಾದ ಊರ್ಮಿಳಾ ರಮೇಶ್ ಕುಮಾರ್, ಪ್ರತಿಭಾ ಕುಳಾಯಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು, ಆರ್ಕಿಟೆಕ್ಟ್ ಪ್ರಮಲ್ ಕುಮಾರ್ ಕಾರ್ಕಳ, ದಿನೇಶ್ ಅಮೀನ್ ಕುಂದಾಪುರ, ನವನೀತ್ ಹಿಂಗಾಣಿ, ಉಮೇಶ್ ಬಗೇರ ಹೇರಾಜೆ, ರಾಜೇಂದ್ರ ಚಿಲಿಂಬಿ, ನಿತ್ಯಾನಂದ ನಾವರ, ಹರೀಶ್ ಕೆ. ಪೂಜಾರಿ, ರಾಜೇಶ್ ಅಂಚನ್, ವಸಂತ ಅಂಚನ್, ಜೈವಿಕ್ರಂ ಕಲ್ಲಾಪು, ನಾರಾಯಣ ಮಚ್ಚಿನ, ಕುಮಾರ್ ಇರುವೈಲ್, ಸಂತೋಷ್ ಉಗ್ಗೆಲ್ ಬೆಟ್ಟು, ನಾಗೇಶ್ ಪೂಜಾರಿ ಬೈಕಂಪಾಡಿ, ಗಣೇಶ್ ಪೂಜಾರಿ, ವಿದ್ಯಾ ರಾಕೇಶ್, ಸುಧಾ ಸುರೇಶ್ ಸೇರಿದಂತೆ ಅನೇಕ ಉದ್ಯಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ ಉದ್ಯಮಿಗಳು ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಸಮಾಜದ ಐಕ್ಯತೆ ಮತ್ತು ಸೇವಾ ಮನೋಭಾವದಿಂದ ಶ್ರೀ ಕ್ಷೇತ್ರವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now