ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಕೆರೆಮನೆ ಶಿವಾನಂದ ಹೆಗಡೆಗೆ ಅಕಾಡೆಮಿ ಪ್ರಶಸ್ತಿ ಪ್ರಧಾನ

ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಕೆರೆಮನೆ ಶಿವಾನಂದ ಹೆಗಡೆಗೆ ಅಕಾಡೆಮಿ ಪ್ರಶಸ್ತಿ ಪ್ರಧಾನ
0Shares

ಕಾರವಾರ: ಯಕ್ಷಗಾನ ಕ್ಷೇತ್ರದಲ್ಲಿ ನೀಡಿದ ಅಪೂರ್ವ ಕೊಡುಗೆಗಾಗಿ ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ-2024 ಪ್ರದಾನ ಮಾಡಲಾಗಿದೆ.

ಗುರುವಾರ ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಯಕ್ಷಗಾನ ಕಲೆಯ ಸಂರಕ್ಷಣೆ, ಪ್ರಚಾರ ಹಾಗೂ ಅಭಿವೃದ್ಧಿಗೆ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೆರೆಮನೆ ಯಕ್ಷಗಾನ ಪರಂಪರೆಯ ಪ್ರಮುಖ ವಾರಸುದಾರರಾಗಿರುವ ಶಿವಾನಂದ ಹೆಗಡೆ ಅವರು ಹಲವು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ವಿಶಿಷ್ಟ ಅಭಿನಯ, ಭಾಗವತಿಕೆ ಹಾಗೂ ಕಲಾ ಸೇವೆಯ ಮೂಲಕ ಯಕ್ಷಗಾನವನ್ನು ದೇಶ-ವಿದೇಶಗಳಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಭಾರತದ ಅತ್ಯುನ್ನತ ಕಲಾ ಗೌರವಗಳಲ್ಲಿ ಒಂದಾದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಕಲೆಗೆ ಸಂದ ದೊಡ್ಡ ಗೌರವವಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಈ ಗೌರವ ದೊರೆತ ಹಿನ್ನೆಲೆಯಲ್ಲಿ ವಿವಿಧ ಗಣ್ಯರು, ಯಕ್ಷಗಾನ ಕಲಾವಿದರು, ಅಭಿಮಾನಿಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ. ಈ ಪ್ರಶಸ್ತಿ ಯಕ್ಷಗಾನ ಕಲೆಯ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now