ಬರ್ಗಿ ಅರಿವು ಕೇಂದ್ರದಲ್ಲಿ ಅರ್ಥಪೂರ್ಣ ಗ್ರಂಥಪಾಲಕರ ದಿನಾಚರಣೆ* 

ಬರ್ಗಿ ಅರಿವು ಕೇಂದ್ರದಲ್ಲಿ ಅರ್ಥಪೂರ್ಣ ಗ್ರಂಥಪಾಲಕರ ದಿನಾಚರಣೆ* 
0Shares

ಬರ್ಗಿ ಅರಿವು ಕೇಂದ್ರದಲ್ಲಿ ಅರ್ಥಪೂರ್ಣ ಗ್ರಂಥಪಾಲಕರ ದಿನಾಚರಣೆ
“ಡಿಜಿಟಲ್ ಯುಗದಲ್ಲೂ ಪುಸ್ತಕದ ಮಹತ್ವ ಅಚಲ” – ಎನ್ ಆರ್ ಗಜು
ಕುಮಟಾ: ಇಲ್ಲಿನ ಬರ್ಗಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅತಿಥಿ ಓದುಗರಾಗಿ ಪಾಲ್ಗೊಂಡ ಕುಮಟಾ ಸೀನಿಯರ್ ಚೇಂಬರ್ ಕಾರ್ಯದರ್ಶಿ ಎನ್.ಆರ್. ಗಜು ಡಾ. ಎಸ್. ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನೆಗೈದು, ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಸ್ಮರಣಾರ್ಥ ಗ್ರಂಥಪಾಲಕರ ದಿನ ಆಚರಿಸಲಾಗುತ್ತಿರುವುದು ಅರ್ಥಪೂರ್ಣ ಎಂದರು. “ಓದುಗರ ಸಂಖ್ಯೆ ಕುಗ್ಗುತ್ತಿರುವ ಇಂದಿನ ಸಂದರ್ಭದಲ್ಲಿ ಓದುವ ಹವ್ಯಾಸಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿರುವ ಬರ್ಗಿಯ ಹಿರಿಯ ಚೇತನಗಳ ಸೇವೆ ಶ್ಲಾಘನೀಯ. ಡಿಜಿಟಲ್ ಯುಗದಲ್ಲಿಯೂ ಪುಸ್ತಕದ ಮಹತ್ವ ಕಡಿಮೆಯಾಗಿಲ್ಲ. ಮಾಹಿತಿಯ ಮಹಾಪೂರದಲ್ಲಿ ಸರಿಯಾದ ಜ್ಞಾನವನ್ನು ಓದುಗರಿಗೆ ತಲುಪಿಸುವಲ್ಲಿ ಗ್ರಂಥಪಾಲಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ” ಎಂದರು.
ಹಿರಿಯ ನಿಯತ ಓದುಗ ಭಾಸ್ಕರ ದೇಸಾಯಿ ಮಾತನಾಡಿ, ಮೊಬೈಲ್ ಬಳಕೆ ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಕುಂದಿಸದಂತೆ ಹಿರಿಯರು ಮಾರ್ಗದರ್ಶನ ನೀಡಬೇಕು. ಗ್ರಂಥಾಲಯ ಇಲಾಖೆ ಮತ್ತು ಗ್ರಂಥಪಾಲಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು. ಗ್ರಂಥಾಲಯದ ಸುವ್ಯವಸ್ಥಿತತೆ ಮತ್ತು ಅಭಿವೃದ್ಧಿಗೆ ಗ್ರಂಥಪಾಲಕಿ ಕುಸುಮ ನಾಯ್ಕ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಮನೆಯಲ್ಲಿಯೇ ಗ್ರಂಥಭಂಡಾರವನ್ನು ಹೊಂದಿರುವ ಓದುಗ ಪಿ.ಎನ್. ಪಟಗಾರ ಅವರು ಡಾ. ರಂಗನಾಥನ್ ಅವರ ಭಾವಚಿತ್ರವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಲ್ಲದೇ ಪುಸ್ತಕ ಪ್ರೇಮವನ್ನು ಬೆಳೆಸುವಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವುದನ್ನು ಪ್ರಶಂಸಿಸಲಾಯಿತು.
ಬರ್ಗಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು. ಗಣಿತಶಾಸ್ತ್ರಜ್ಞರಾಗಿದ್ದ ಡಾ. ರಂಗನಾಥನ್ ಅವರು ತಮ್ಮ ಜೀವನವನ್ನು ಗ್ರಂಥಾಲಯ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಿಸಿ, ಭಾರತದಲ್ಲಿ ಗ್ರಂಥಾಲಯ ವಿಜ್ಞಾನಕ್ಕೆ ವ್ಯವಸ್ಥಿತ ರೂಪ ನೀಡಿದರು. ಅವರ “ಗ್ರಂಥಾಲಯದ ಪಂಚಸೂತ್ರಗಳು” ಇಂದಿಗೂ ಪ್ರಸ್ತುತವಾಗಿವೆ. “ಗ್ರಂಥಗಳು ಉಪಯೋಗಕ್ಕಾಗಿ, ಗ್ರಂಥಗಳು ಎಲ್ಲರಿಗಾಗಿ, ಪ್ರತಿಯೊಬ್ಬ ಓದುಗನಿಗೆ ಅವನ ಗ್ರಂಥ, ಓದುಗರ ಸಮಯ ಉಳಿಸಿ, ಗ್ರಂಥಾಲಯ ಬೆಳೆಯುವ ಶಿಶು” ಎಂಬ ಪಂಚಸೂತ್ರಗಳಲ್ಲಿ ಗ್ರಂಥಾಲಯದ ನಿಜವಾದ ತತ್ವಶಾಸ್ತ್ರ ಅಡಗಿದೆ ಎಂದರು.
ಗ್ರಂಥಪಾಲಕಿ ಕುಸುಮ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರಲ್ಲದೇ, ಇಲ್ಲಿಯ ಗ್ರಂಥಾಲಯಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರ ಹಾಗೂ ಪುಸ್ತಕಗಳನ್ನು ನಿರಂತರವಾಗಿ ನೀಡುತ್ತಿರುವ ಸಹೃದಯೀ ದಾನಿಗಳನ್ನು ಸ್ಮರಿಸಿದರು.
ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹದ ಸ್ಥಳವಲ್ಲ; ಅದು ಜ್ಞಾನದ ದೇವಾಲಯ, ವಿಚಾರಗಳ ಭಂಡಾರ ಮತ್ತು ವ್ಯಕ್ತಿತ್ವ ನಿರ್ಮಾಣದ ಕೇಂದ್ರ. ಪುಸ್ತಕ, ಓದುಗ ಮತ್ತು ಗ್ರಂಥಪಾಲಕ ಈ ಮೂರರ ತ್ರಿವೇಣಿ ಸಂಗಮವೇ ಗ್ರಂಥಾಲಯ. ಆದ್ದರಿಂದ ಮಕ್ಕಳು, ಯುವಜನರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯ ಬಳಸುವ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಉದ್ಯೋಗಿಗಳು, ಉಪನ್ಯಾಸಕ ಮಂಜುನಾಥ ನಾಯ್ಕ, ಕಾರ್ಯಕ್ರಮ ಸಂಘಟನೆಯಲ್ಲಿ ನೆರವಾದ ಕುಮಾರಿ ಸ್ನೇಹಾ ಸೇರಿದಂತೆ ಬರ್ಗಿ ಪ್ರೌಢಶಾಲೆಯ ವಿದ್ಯಾರ್ಥಿ-ಓದುಗರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now