
ಹೊನ್ನಾವರದಲ್ಲಿ ಹಾಡುಹಗಲೇ ಶಿಕ್ಷಕಿಯ ಮನೆಗೆ ಕನ್ನ: ₹4.80 ಲಕ್ಷದ ಚಿನ್ನಾಭರಣ, ನಗದು ಕಳವು
ಹೊನ್ನಾವರ: ಹಾಡುಹಗಲೇ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಗೋದ್ರೇಜ್ ಕಪಾಟಿನ ಲಾಕರ್ ಮೀಟಿ ₹4.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಇಡಗುಂಜಿ ಸಮೀಪದ ಕುಳಿಮನೆ ಶಾಂತಿನಗರದಲ್ಲಿ ನಡೆದಿದೆ.
ಕುಳಿಮನೆ ನಿವಾಸಿ ಶಿಕ್ಷಕಿ ಸಂಧ್ಯಾ ಗುರುದತ್ತ ಶೇಟ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಆ.11ರಂದು ಬೆಳಗ್ಗೆ 9.45ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ ಎನ್ನಲಾಗಿದೆ.
ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜ್ ಕಪಾಟನ್ನು ತೆಗೆದು, ಅದರ ಲಾಕರ್ ಅನ್ನು ಕಬ್ಬಿಣದ ಕತ್ತಿಯಿಂದ ಮೀಟಿ ತೆರೆದಿದ್ದಾರೆ. ಬಳಿಕ ಲಾಕರ್ನಲ್ಲಿದ್ದ ಸುಮಾರು ₹4.80 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹10 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಘಟನೆ ಕುರಿತು ಶಿಕ್ಷಕಿ ಸಂಧ್ಯಾ ಶೇಟ್ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳುವಾದ ಚಿನ್ನಾಭರಣ ಹಾಗೂ ಹಣವನ್ನು ಪತ್ತೆಹಚ್ಚಿ, ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಮಂಕಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now