ಮರೆಯಾದರೂ ಮರೆಯಲಾಗದ ಮಾಣಿಕ್ಯ ನಮ್ಮ ಡಾಕ್ಟರ್ ರಾಘವೇಂದ್ರರಾವ್ ಆರೂರು

ಮರೆಯಾದರೂ ಮರೆಯಲಾಗದ ಮಾಣಿಕ್ಯ ನಮ್ಮ ಡಾಕ್ಟರ್ ರಾಘವೇಂದ್ರರಾವ್ ಆರೂರು
0Shares

ಕೊಳಲಗಿರಿಗೆ ಕರೆಂಟ್ ತರುವಲ್ಲಿ, ಟೆಲಿಫೋನ್ ಎಕ್ಸ್ಚೇಂಜ್ ತರುವಲ್ಲಿ, ರಾಷ್ಟ್ರೀಯ ಬ್ಯಾಂಕ್ ತರುವಲ್ಲಿ, ಶ್ರೀಂಬ್ರ ಸೇತುವೆ ಆಗುವಲ್ಲಿ, ಸರಕಾರಿ ಆಸ್ಪತ್ರೆ ತರುವಲ್ಲಿ ಮುಖ್ಯ ಕಾರಣೀಕರ್ತರಾದವರು.
ಗ್ರಾಮೀಣ ಪ್ರದೇಶದಲ್ಲಿ ನಮ್ಮ ಊರನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಈ ಒಬ್ಬ ವ್ಯಕ್ತಿ ಕೇವಲ ವ್ಯಕ್ತಿಯಾಗಿರದೇ ಅಪ್ರತಿಮ ಶಕ್ತಿಯಾಗಿ ಮೂಡಿಬಂದು ಈ ಊರಿನ ಹಲವಾರು ಪ್ರಥಮಗಳ ಹರಿಕಾರರಾದವರು.

ಬಹಳಷ್ಟು ಕುಟುಂಬಗಳ ಕುಟುಂಬ ವೈದ್ಯರು ಇವರು. ಯಾವುದೇ ಸ್ಕ್ಯಾನಿಂಗ್, ಎಕ್ಸ್ರೇ, ರಕ್ತ ಪರೀಕ್ಷೆ , ಇವೆಲ್ಲರ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡದೆ ಕೇವಲ ಕಣ್ಣನ್ನು ಅರಳಿಸಿ ಪರೀಕ್ಷಿಸುವುದು, ಬಾಯಿಯನ್ನು ತೆರೆಸಿ ಪರೀಕ್ಷಿಸುವುದು, ಏನು ಆಹಾರ ತಿಂದಿದ್ದೀರಿ ನಿದ್ದೆ ಚೆನ್ನಾಗಿ ಬಂದಿದೆಯಾ ಎಂದು ಅಂದಿನ ಅವನ ದಿನಚರಿಯನ್ನು ವಿಚಾರಿಸಿ ಆ ದೇಹಕ್ಕೆ ಏನಾಗಿದೆ ಎಂಬ ಚಿಕಿತ್ಸೆ ನೀಡಿದವರು ಇವರು. ಆರೋಗ್ಯ ಸಲಹೆ‌ಯ ಜ್ಞಾನ ಭಂಡಾರ
ಆರೋಗ್ಯ ಜ್ಞಾನ ಗ್ರಂಥಾಲಯ ಇವರಾಗಿದ್ದವರು. ಅಂದು ಕಷ್ಟದ ಕಾಲ ಅನಾರೋಗ್ಯದಿಂದ ಹಿರಿಯ ನಾಗರಿಕರು ಮನೆಯಲ್ಲಿ ಎದ್ದೇಳಲು ಸಾಧ್ಯವಾಗದಿದ್ದಾಗ ಎಷ್ಟೇ ರಾತ್ರಿಯಾದರೂ ಅವರ ಮನೆಗೆ ತಮ್ಮ ಮೋಟಾರು ಬೈಕಿನಲ್ಲಿ ಹೋಗಿ ತಮ್ಮ ಕರ್ತವ್ಯ ದೃಷ್ಟಿಯಿಂದ ಶುಶ್ರೂಷೆ ನೀಡಿ ಆರೋಗ್ಯವಂತರನ್ನಾಗಿಸಿದ ಮಹಾ ವೈದ್ಯರು.
ತನ್ನ ಮನೆಯಲ್ಲಿಯೇ ಚಿಕಿತ್ಸೆಗಾಗಿ ಕ್ಲಿನಿಕ್ ನ್ನು ತೆರೆದು ಹಣದ ಆಸೆಗಾಗಿ ಮೆಡಿಸಿನ್ ನೀಡದೆ ಅಲ್ಪ ಹಣದಲ್ಲಿ ರೋಗಿಯನ್ನು ಗುಣಪಡಿಸಿ ಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಪತ್ನಿಯನ್ನು ಆಗಾಗ್ಗೆ ಗೀತಾ ಆ ಮಾತ್ರೆ ಕೊಡು… ಗೀತಾ ಆ ಶಿರಫ್ ಕೊಡು …‌ ಗೀತಾ…. ಗೀತಾ ಎಂದು ಕರೆಯುವ ಆ ಧ್ವನಿ ಅದಕ್ಕೆ ಉತ್ತರವಾಗಿ ರೀ…. ರೀ…. ರೀ….. ಎಂಬ ಗೀತಮ್ಮನ ಮಾತು ಇಂದಿಗೂ ನಮ್ಮ ಕಿವಿಯೊಳಗೆ ಪಿಸುಗುಟ್ಟುತ್ತಿದೆ…..
ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಈ ವೈದ್ಯ ಪುಣ್ಯಾತ್ಮರು.
ಯಾರಿಗೆ ಯಾವ ಮಾತ್ರೆ, ಶಿರಫ್ ಎಷ್ಟು ಹೊತ್ತು ಎಂದು ಇವರು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳುವ ಸ್ಮರಣೀಯರು.,

ಮರೆಯಾಯಿತಲ್ಲವೇ ಈ ಜೀವ…….

ಬಹಳಷ್ಟು ಜ್ಞಾನಶಕ್ತಿ ಪಾಂಡಿತ್ಯ ಇವರಲ್ಲಿತ್ತು. ನೇರ ನಡೆ-ನುಡಿಗಳ ಮುಖಾಂತರ ಇವರು ಶಿಸ್ತಿನ ಜೀವನ ನಡೆಸಿದವರು…. ತನ್ನೊಂದಿಗೆ ಮಾತನಾಡುತ್ತಿರುವವನಿಗೆ ಯಾವ ರೀತಿಯಲ್ಲಿ ವಿಷಯ ತಲುಪಿಸಬೇಕು ಅವನು ಯಾವ ರೀತಿಯಲ್ಲಿ ತಿಳಿದುಕೊಳ್ಳಬೇಕೆಂಬುದನ್ನು ಕ್ಷಣಾರ್ಧದಲ್ಲಿ ನಿರ್ಧರಿಸಿ ಮಾತನಾಡುತ್ತಿದ್ದರು.. ನನ್ನ ಕಣ್ಣೆದುರೇ ಸಂಭವಿಸಿದ ಇದಕ್ಕೆ ಒಂದು ಹಾಸ್ಯ ಘಟನೆ ನೆನಪಾಗುತ್ತಿದೆ.
ಅಂದು ಡಿಗ್ರಿ ಓದುತ್ತಿರುವ ಹುಡುಗನೊಬ್ಬ ಅವರ ಕ್ಲಿನಿಕ್ ನಲ್ಲಿ ಬಂದಿದ್ದ. ಆ ಸಂದರ್ಭದಲ್ಲಿ ಇವರು ಬೇರೆಯವರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಡಿಗ್ರಿಯ ಹುಡುಗ ತನ್ನ ಅಜ್ಜಿಯ ನಿತ್ಯದ ಮಾತ್ರೆಯನ್ನು ತೆಗೆದುಕೊಂಡು ಹೋಗಲು ಬಂದಿದ್ದ.. ಇವರು ಮೊದಲು ಒಂದು ಚೀಟಿ ಕೊಡುತ್ತಿದ್ದರು ಕ್ಲಿನಿಕ್ಕಿಗೆ ಬರುವಾಗ ತನ್ನಿ ನನಗೆ ಪ್ರಾಯ ಆಗ್ತಾ ಬಂತು ನೆನಪಿನ ಶಕ್ತಿಗೆ ಕಡಿಮೆಯಾಗಿದೆ ಅದಕ್ಕಾಗಿ ಇದನ್ನು ನೋಡಿದ ಕೂಡಲೇ ನನಗೆ ಗೊತ್ತಾಗುತ್ತದೆ ಅಂತ ಹೇಳಿ,.. ಡಾಕ್ಟ್ರು ಈ ಹುಡುಗನಲ್ಲಿ ಕೊಟ್ಟಿರುವ ಚೀಟಿ ತಂದಿದ್ಯಾ ಕೇಳಿದರು. ಆವಾಗ ಉಡಾಫೆಯಿಂದ ಎಂಥ ಚೀಟಿ ನಿಮಗೆ ಅಂದ… ಅದಕ್ಕೆ ಡಾಕ್ಟರ್ ಹೇಳಿದರು ನನಗೀಗ ಪ್ರಾಯ ಆಗಿದೆ ಕೆಲವೊಂದು ಮದ್ದು ಎಷ್ಟು ಪ್ರಮಾಣದಲ್ಲಿ ಯಾರಿಗೆ ಕೊಡ್ತಾ ಇದ್ದೇನೆ ಎಂಬುದು ನೆನಪಾಗುವುದಿಲ್ಲ ಚೀಟಿ ಇದ್ದರೆ ಸುಲಭವಾಗುತ್ತದೆ ಚೀಟಿ ಕೊಡು ಅಂದ್ರು… ಅದಕ್ಕೆ ಆ ಯುವಕ 20 ರಿಂದ 25 ವರ್ಷದಿಂದ ಮದ್ದು ಕೊಡ್ತಿರುವಂತಹ ನಿಮಗೆ ಚೀಟಿ ಎಂತ ಅಷ್ಟು ಗೊತ್ತಾಗೋದಿಲ್ವಾ ಅಂದುಬಿಟ್ಟ . ಅದಕ್ಕೆ ಡಾಕ್ಟರು ಕ್ಷಣಾರ್ಧದಲ್ಲಿ ಅವನಿಗೆ ಏನು ಹೇಗೆ ಎಂಬುದನ್ನು ತಿಳಿಸಿಕೊಟ್ಟ ಘಟನೆ ನನಗೆ ಮೈ ಜುಮ್ ಅನಿಸುತ್ತದೆ.. ಏನೆಂದರೆ ಆ ಯುವಕನಲ್ಲಿ ನೀನೀಗ ಎಷ್ಟನೇ ಕ್ಲಾಸು ಓದುವೆ ಅಂದ್ರು. ಅದಕ್ಕೆ ಈಗ ನಾನು ಡಿಗ್ರಿ ಓದುತ್ತಿದ್ದೇನೆ ಎಂದು ಉತ್ತರಿಸಿದ. ಎಸ್ ಎಸ್ ಎಲ್ ಸಿ ಪಾಸ್ ಆಗಿ ಡಿಗ್ರಿ ಹೋಗಿದ್ಯಾ ಹೇಳಿದರು.. ಎಸ್ ಎಸ್ ಎಲ್ ಸಿ ಪಾಸ್ ಆಗದೆ ಏನು. ನಾನು ಈಗ ಡಿಗ್ರಿ ಎಂದು ಮತ್ತೆ ಉಡಾಫೆ ಉತ್ತರ ನೀಡಿದ… ಹಾಗಾದರೆ ಸರಿ ಇಲ್ಲಿಗೆ ಬಾ ಎಂದು ಹಾಗೆ ಅವನನ್ನು ಕರೆದರು ನಾನಂದುಕೊಂಡೆ ಡಾಕ್ಟರ್ ಸಿಟ್ಟಿನಲ್ಲಿ ಎರಡು ಬಾರಿಸಬಹುದು ಎಂದು. ಆದರೆ ಹಾಗೆ ಆಗಲಿಲ್ಲ
ಅಲ್ಲೇ ಇದ್ದ ರಟ್ಟಿಗೆ ಅಂಟಿರುವ ಪೇಪರನ್ನು ತೆಗೆದು ಪೆನ್ ಹಿಡಿದು ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ ಬೇಗ ಉತ್ತರ ನೀಡುವೆಯಾ ಎಂದರು . ಎಸ್ ಎಸ್ ಎಲ್ ಸಿ ಯಲ್ಲಿ ಟೋಟಲ್ ಮಾರ್ಕ್ ಎಷ್ಟು ಕೇಳಿದರು. ಟೋಟಲ್ 339 ಎಂದ… ಸರಿ ಹಾಗಾದ್ರೆ ನೀನು ಪಡೆದ ಆರು ಸಬ್ಜೆಕ್ಟ್ ನ ಮಾರ್ಕನ್ನು ಹೇಳು ಟೋಟಲ್ ಎಷ್ಟಾಗುತ್ತದೆ ಎಂದು ನೋಡುತ್ತೇನೆ ಎಂದರು. ಆ ವ್ಯಕ್ತಿಗೆ ತಾನು ಕಲಿತ ಆರು ಸಬ್ಜೆಕ್ಟ್ ನ ಮಾರ್ಕ್ ನೆನಪಿರಲಿಲ್ಲ ಅಷ್ಟಕ್ಕೆ ಕೇಳಿದರು ನಿನಗೆ ನೀನು ಕಲಿತ ಆರು ಸಬ್ಜೆಕ್ಟ್ ನ ಮಾರ್ಕೇ ನಿನಗೆ ನೆನಪಿಲ್ಲ ನನಗೆ ಸಾವಿರಾರು ರೋಗಿಗಳ ಅಷ್ಟೊಂದು ಮಾತ್ರೆಗಳ ನೆನಪನ್ನು ಇಟ್ಟುಕೊಳ್ಳುವುದು ಹೇಗೆ ಸಾಧ್ಯ. ನಮ್ಮತ್ರ ಮಾತಾಡುವಾಗ ಸ್ವಲ್ಪ ವಿಧೇಯತೆ ಇರಲಿ ಎಂದು ಗದರಿಸಿದರು…..

*ಧಾರ್ಮಿಕ ಕಾರ್ಯಕ್ರಮಗಳ ನೇತಾರರು, ಆರೂರು ವಿಷ್ಣುಮೂರ್ತಿ ದೇವಳದ ಆಡಳಿತ ಮೋಕ್ತೇಸರರು
ಊರಿನ ದೇವಸ್ಥಾನ, ಅನೇಕ ಗ್ರಾಮಗಳ ಗ್ರಾಮ ದೇವರ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಳಶ ಕೈಂಕರ್ಯದ ಮಾರ್ಗದರ್ಶನ ನೀಡುವ ಧಾರ್ಮಿಕ ಚಿಂತಕರು. ಕೊಳಲಗಿರಿ, ಆರೂರು, ಹಾವಂಜೆ, ಕುಕ್ಕೆಹಳ್ಳಿ, ಕೊಡವೂರು, ಉಪ್ಪೂರು ಪರಿಸರದವರಿಗೆ ರಾಶಿ ಪೂಜೆಯ ಮಹತ್ವವನ್ನು ತಿಳಿಸಿಕೊಟ್ಟವರು. ಆರೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೂರೇ ಮೂರು ರಾಶಿ ಪೂಜೆ ಜರುಗಿದ್ದು ಇದರಲ್ಲಿ ಒಂದು ಇವರ ಆತ್ಮೀಯ ಒಡನಾಡಿ ರೋಯಲ್ ರತ್ನಾಕರ ಡಿ ಶೆಟ್ಟಿ ಅವರ ರಾಶಿ ಪೂಜೆಯಿಂದ ಡಾಕ್ಟರ್ ಇವರ ಧಾರ್ಮಿಕ ಸೇವೆ ಮೆಚ್ಚುವಂಥದ್ದು. ಅವರವರ ಜನ್ಮ ರಾಶಿಗೆ ತಕ್ಕಂತೆ ಪೂಜೆಯನ್ನು ಸಲ್ಲಿಸಿಕೊಳ್ಳಲು ಅವರವರ ರಾಶಿಗೆ ಸಂಬಂಧಿಸಿದಂತೆ ಪ್ರಾರ್ಥಿಸಿಕೊಳ್ಳಲು ಅವಕಾಶ ನೀಡಿ ಯಾವ ಯಾವ ರಾಶಿಯವರಿಗೆ ಏನೇನು ಸೇವೆ ನಡೆಯಬೇಕೆಂಬುದನ್ನು ಇವರು ಬಹಳಷ್ಟು ಅರಿತಿದ್ದರು. ಭರತನಾಟ್ಯ ಯಕ್ಷಗಾನ ಸಂಕೀರ್ತನೆ ವಿವಿಧ ವಾದನಗಳ ಮೂಲಕ ಆಯಾಯ ರಾಶಿಯವರಿಗೆ ರಾಶಿ ಪೂಜೆ ಸಲ್ಲಿಸಿಕೊಂಡವರು ನಾವಾಗಿತ್ತು.
ಸಂಕೀರ್ತನೆ ಭಜನೆ ಹರಿಕಥೆ ಇವರದ್ದು ಆಯ್ಕೆಯ ಹವ್ಯಾಸ… ಇವರ ಮನೆಯಲ್ಲಿ ಸದಾ ಕೇಳಿ ಬರುತ್ತಿದ್ದ ದಾಸರವಾಣಿ .,…… ಡಾಕ್ಟ್ರಿಗೆ ವಿದ್ಯಾಭೂಷಣ್ ರವರ ಹಾಡು ಎಂದರೆ ಇವರಿಗೆ ಬಹಳ ಅಚ್ಚುಮೆಚ್ಚು. ಇವರ ಮನೆಯಲ್ಲಿ ಸದಾ ಈ ಹಾಡುಗಳೇ ಕೇಳಿ ಬರುತ್ತಿತ್ತು,

ನೀ ಮಾಯೆಯೊಳಗೋ…. ನಿನ್ನೊಳು ಮಾಯೆಯೋ…..

ಉಡುಪಿಯ ಕಂಡೀರ ಉಡುಪಿಯ ಕೃಷ್ಣನ ಕಂಡೀರ…….

ಇಷ್ಟು ದಿನ ಈ ವೈಕುಂಠ…. ಎಷ್ಟು ದೂರವು ಎನ್ನುತಲಿದ್ದೆ.
ಈ ಹಾಡುಗಳನ್ನೇ ನಿತ್ಯ ಕೇಳಿಕೊಂಡು ಒಂದಷ್ಟು ಪ್ರವಚನ ಪುರಾಣ ಪುಟಗಳನ್ನು ಓದಿ ಮನನ ಮಾಡಿಕೊಳ್ಳುತ್ತಿದ್ದರು.

ಮತ್ತೊಂದು ವಿಶೇಷತೆ ಎಂದರೆ ಆರೂರು ದೇವಸ್ಥಾನದ ರಥೋತ್ಸವ ಇನ್ನಿತರ ಕಾರ್ಯಕ್ರಮಗಳಿಗೆ ನಮ್ಮ ಮುಖಾಂತರ ಕೆಲವರಿಗೆ ಆಹ್ವಾನ ಪತ್ರಿಕೆಯನ್ನು ತಲುಪಿಸುತ್ತಿದ್ದರು.. ತಾನು ನೀಡಿದ ಆಹ್ವಾನ ಪತ್ರಿಕೆಗೆ ಯಾರೆಲ್ಲಾ ಆ ಪರಿಸರಕ್ಕೆ ಬಂದಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರು ಇವರು. ಏಕೆಂದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಇವರು ಗುರುತಿಸಿ ಶಂಕರ, ಗುರುವ, ಸೋಮಯ್ಯ , ಚಿನ್ನು, ಕಮಲ ಸುಶೀಲ ಲಲಿತ ಇವರೆಲ್ಲ ಬಂದಿದ್ದರು, ಮಾಧವ ಪಾಣ, ತೌಡ ಪೂಜಾರಿ ಬಂದಿದ್ದರು. ನೀನು ಕೂಡ ಸ್ವಲ್ಪ ಹೊತ್ತು ಬಂದು ಹೋದಿ ಎಂದು ನಿಖರವಾಗಿ ತಿಳಿಸುತ್ತಿದ್ದರು. ಆವಾಗ ನಮಗೆ ನಾವೇ ಹೆಮ್ಮೆಪಡುವಂತಾಗುತ್ತಿತ್ತು

1980- 81ರ ವರ್ಷದಲ್ಲಿ ಕೊಳಲಗಿರಿ ಕರೆಂಟ್ ಬೆಳಕು ತಂದ ಹರಿಕಾರ…
ತನ್ನ ಆತ್ಮೀಯ ಸ್ನೇಹಿತ ರೋಯಲ್ ರತ್ನಾಕರ್ ಡಿ ಶೆಟ್ಟಿ ಹಾಗೂ ಕೊಳಲಗಿರಿ ಚರ್ಚಿನ ಧರ್ಮಗುರುಗಳು ಸೇರಿ ಹೋರಾಟ ನಡೆಸಿ ಸುಮಾರು 17 ವಿದ್ಯುತ್ ಕಂಬಗಳನ್ನು ತರಿಸಿ ಸಾಹಸ ಮೆರೆದು ಪ್ರಪ್ರಥಮ ಬಾರಿಗೆ ಬೆಳಕನ್ನು ತಂದ ಹರಿಕಾರ ಇವರೇ…..

ನಮ್ಮೂರಿಗೆ ಕರೆಂಟ್ ಬಂದರೆ ಸಾಲದು ಎಂದು ಪ್ರಪ್ರಥಮ ಬಾರಿಗೆ ಕೊಳಲಗಿರಿ ಟೆಲಿಫೋನ್ ಸೇವೆ ತಂದ ಸಾಧಕರಿವರು…..

ತನ್ನ ಮನೆಯ ಕಟ್ಟಡದಲ್ಲಿಯೇ ಟೆಲಿಫೋನ್ ಎಕ್ಸ್ಚೇಂಜ್ ಆಫೀಸು ನಡೆಸಿ ತದನಂತರ ಅದು ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಇವರದ್ದು ಬಹಳಷ್ಟು ಇತ್ತು…. ನಂತರದ ದಿನಗಳಲ್ಲಿ ಬಿಎಸ್ಎನ್ಎಲ್ ಟವರ್ ಸ್ಥಾಪಿಸಿ ಇದರ ಮೂಲಕ ಊರಿಗೆ ಇಂಟರ್ನೆಟ್ ಬರಲು ಸಹಕರಿಸಿದ ಮಹಾನ್ ಧುರೀಣ ಇವರು.

ಕೊಳಲಗಿರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದು ಬೇಕೆಂಬ ಹಂಬಲದಿಂದ ಮನವಿ ಅರ್ಜಿಗಳನ್ನೆಲ್ಲ ಅಧಿಕಾರಿ ವರ್ಗಕ್ಕೆ ಸರಕಾರದವರೆಗೆ ಬಹಳಷ್ಟು ಸಲ್ಲಿಸಿ ಹಗಲಿರುಳು ಹೋರಾಟ ನಡೆಸಿ ಸುಮಾರು ನಾಲ್ಕುವರೆ ಎಕ್ರೇ ಭೂಮಿ ಮಂಜೂರಾತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಮಂಜೂರು ಗೊಳಿಸಿ ತಂದರು. ಆದರೂ ಕೆಲವೊಂದು ರಾಜಕೀಯ ಹಸ್ತಕ್ಷೇಪದಿಂದ ಈ ಎಲ್ಲಾ ಜಾಗವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೊರಕಲಿಲ್ಲ ಆದರೂ ಅಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಸರಕಾರಕ್ಕೆ ಮನವಿ ಮಾಡಿ ಆರೋಗ್ಯ ಕೇಂದ್ರ ನಿರ್ಮಾಣ ಇವರಿಂದ ಸಾಧ್ಯವಾಯಿತು. ಸರಕಾರದ ಸವಲತ್ತುಗಳು ಗ್ರಾಮೀಣ ಭಾಗದಲ್ಲಿ ದೊರಕಲು, ಪ್ರಯೋಜನ ಪಡೆಯಲು ನೆರವಾಯಿತು. ಉಚಿತ ಆರೋಗ್ಯ ಸೇವೆ ಪಡೆಯುವಂತಾಯ್ತು. ನಮ್ಮ ಡಾಕ್ಟರ್ ಜಿಲ್ಲಾ ಸರ್ಜನ್ ಆಗಿರುವುದು ಮತ್ತಷ್ಟು ಹೆಮ್ಮೆ ಎನಿಸುತ್ತದೆ.

ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕತ ಬ್ಯಾಂಕೊಂದರ ಆಗಮನಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ತನ್ನ ಮನೆಯ ಪಕ್ಕದಲ್ಲಿಯೇ ಕಟ್ಟಡವನ್ನು ನಿರ್ಮಿಸಿ ಅಂದು ವಿಜಯ ಬ್ಯಾಂಕ್ ಈಗ ಬ್ಯಾಂಕ್ ಆಫ್ ಬರೋಡ ಬ್ಯಾಂಕನ್ನು ಸಾರ್ವಜನಿಕರ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟವರು.

ಅಂದಿನ ಕಾಲಘಟ್ಟದಲ್ಲಿ ಮಣಿಪಾಲಕ್ಕೆ ಹೋಗುವುದೆಂದರೆ ಉಡುಪಿ ಕಲ್ಸಂಕ ಕಡಿಯಾಳಿ ಎಂಜಿಎಂ ಮಾರ್ಗವಾಗಿ ಸಾಗಬೇಕಿತ್ತು ಅಂತಹ ಸಂದರ್ಭದಲ್ಲಿ ಮಣಿಪಾಲಕ್ಕೆ ಕೆಲವೇ ಕೆಲವು ನಿಮಿಷಗಳ ದಾರಿಯಲ್ಲಿ ತಲುಪಬಹುದು ಎಂಬ ಮುಂದಾಲೋಚನೆಯಿಂದ ಪರಾರಿ ಶಿಂಬ್ರಾ ಸೇತುವೆ ನಿರ್ಮಾಣವಾಗಬೇಕು ಎಂದು ಹೋರಾಟ ನಡೆಸಿ ಸಚಿವರಾಗಿದ್ದ ಮಾನ್ಯ ದಿವಂಗತ ವಿ ಎಸ್ ಆಚಾರ್ಯರ ಬೆನ್ನು ಹಿಡಿದು ಅನುದಾನ ತರುವಲ್ಲಿ ಸರಕಾರಕ್ಕೆ ಮನವಿ ಸಲ್ಲಿಸುವಲ್ಲಿ ಇವರ ಪ್ರಯತ್ನ ಅಮೂಲ್ಯ . ನಂತರ ನಮ್ಮೂರಿನವರೇ ಸಚಿವರಾದ ಮಾನ್ಯ ಶ್ರೀ ಪ್ರಮೋದ್ ಮಧ್ವರಾಜ್ ರವರಿಂದ ಆಸ್ಕರ್ ಫರ್ನಾಂಡಿಸ್ ರವರಿಂದ ಶಂಕುಸ್ಥಾಪನೆ ನಡೆಸಿ ಸೇತುವೆ ನಿರ್ಮಾಣವಾಗಿ ಉದ್ಘಾಟನೆ ಆಗಿಯೇ ಬಿಟ್ಟಿತು.
ಪರಾರಿ ಮಣಿಪಾಲ ರಸ್ತೆ ಆಗಬೇಕು, ಅದರ ಮಧ್ಯೆ ಸೇತುವೆ ನಿರ್ಮಾಣ ಮೊದಲ ಹಂತದಲ್ಲಿ ಆಗಬೇಕೆಂಬ ಪಣತೊಟ್ಟ ಇವರ ಸಾಧನೆಗೆ ನಮ್ಮೂರಿನ ಈಗಿನ ಬದಲಾವಣೆಯೇ ಸಾಕ್ಷಿ ಇದೆ…
ಸಮಾಜಕ್ಕೆ ಯುವಕರ ಒಂದಷ್ಟು ಸೇವೆಗಳು ಲಭ್ಯವಾಗಬೇಕೆನ್ನುವ ಮಹಾದೃಷ್ಟಿಯಿಂದ ಒಂದಷ್ಟು ಯುವಕರಿಗೆ ಸಮಾಜ ಸೇವೆಯ ಬಗ್ಗೆ ಪರಿಚಯ ಮೂಡಿಸಿ ಅಂದು ರೂಪುಗೊಂಡ ಯುವ ಮನಸ್ಸುಗಳ ಒಗ್ಗೂಡುವಿಕೆಗಾಗಿ ಮಾರ್ಗದರ್ಶನ ನೀಡಿ
ಯುವ ವಿಚಾರ ವೇದಿಕೆಯ 2001ರಲ್ಲಿ ಉದ್ಘಾಟಸಿದ ಮಹಾತ್ಮರಿವರು….
ಸಮಾಜಮುಖೀ ಸಂಘ ಯುವ ವಿಚಾರ ವೇದಿಕೆ ಕೊಳಲಗಿರಿಯ ಸಲಹೆಗಾರರು ಮಾರ್ಗದರ್ಶಕರು ಇವರ ಅಂದಿನ ಸಂಪೂರ್ಣ ಸಹಕಾರದಿಂದ ಮಾರ್ಗದರ್ಶನದ ಫಲಶ್ರುತಿಯಿಂದ ಇಂದು ಈ ಸಂಘ ರಾಜ್ಯೋತ್ಸವ ಪ್ರಶಸ್ತಿ ದೊರಕುವಲ್ಲಿ ಸಾಧ್ಯವಾಯಿತು ಈ ಕೀರ್ತಿಗೆ ಡಾಕ್ಟರವರ ಕೊಡುಗೆ ಅಪಾರ. ಸಮಾಜದಲ್ಲಿ ಹರಡುತ್ತಿದ್ದ ಕಾಯಿಲೆಗಳು ಪರಿಸರದ ನಾಶ ಅನೇಕ ಮುಂಜಾಗ್ರತೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಯುವ ವಿಚಾರ ವೇದಿಕೆಯೊಂದಿಗೆ ಅನೇಕ ಬೀದಿ ನಾಟಕದಲ್ಲಿ ಭಾಗಿಯಾಗಿದ್ದರು.

ಕೊರೋನಾ ಸಂದರ್ಭದಲ್ಲಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಸಾವಿರಾರು ಜನರಿಗೆ ಔಷಧೋಪಚಾರ ಮಾಡಿದ ಪುಣ್ಯಾತ್ಮರು. ತನ್ನ ಊರಿನಲ್ಲಿ ಕೊರೋನ ಮುಂಜಾಗ್ರತೆಯಾಗಿ ಏನೆಲ್ಲಾ ಕ್ರಮವಹಿಸಿದ್ದೀರಿ ಎಂದು ಅಲ್ಲಲ್ಲಿ ಹೋಗಿ ವಿಚಾರಿಸಿ ನೋಡಿ ಬರುತ್ತಿದ್ದರು. ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಗೂ ಆಗಮಿಸಿ ಮಾರ್ಗದರ್ಶನ ನೀಡಿರುತ್ತೀರಿ.. ನಾವು ವಹಿಸಿದ ಮುಂಜಾಗ್ರತೆಗೆ ನಮಗೆ ಶಹಭಾಸ್ ಎಂದು ಹೇಳಿದವರು. ನಿಮ್ಮ ಈ ಸಾಮಾಜಿಕ ಕಳಕಳಿಗೆ ನಾವು ಧನ್ಯರಾಗಿದ್ದೇವೆ.

ಭ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಮ್ಮ ನಿತ್ಯ ಕರ್ಮಾದಿಗಳೊಂದಿಗೆ ಈ ಪರಿಸರದ ಸುತ್ತಮುತ್ತ ಸ್ವಚ್ಛತೆ , ಮರಕ್ಕೆ ಪೋಷಣೆ, ಗಿಡ ನೆಡುವುದು , ಬೆಳಗ್ಗೆ ಶ್ರಮದಾನ ನಡೆಸಿ ಸುತ್ತಮುತ್ತಲ ಪರಿಸರವನ್ನು ಹಸಿರಾಗಿಸಿದ ಮಹಾನ್ ಪರಿಸರ ಪ್ರೇಮಿ……

ಡಾಕ್ಟರ್ ಮನೆಯಲ್ಲಿ ಸದಾ ಅನುಭವಿಗಳ ತಂಡವು ಅವರ ಅನುಭವಕ್ಕಾಗಿ ಆ ಮಾತುಗಳಿಗಾಗಿ ಕಾದು ಕುಳಿತಿದ್ದರು,… ನಿಮ್ಮ ಮಾರ್ಗದರ್ಶನ ಪಡೆದು ಅದೆಷ್ಟು ಪುಣ್ಯ ಕಾರ್ಯಗಳನ್ನು ಮಾಡಿರುತ್ತಾರೆ ಇದಕ್ಕೆ ನಿಮ್ಮ ಪ್ರೇರಣೆ ಅವರಿಗೆ ಮಹಾ ಶಕ್ತಿಯಾಗಿತ್ತು. ದೈವ ದೇವಸ್ಥಾನಗಳಿಗೆ ಗರ್ಭಗುಡಿಯ ಸುತ್ತ ದೇವಸ್ಥಾನದ ಕಟ್ಟಡಗಳ ವಾಸ್ತು ಆಯವನ್ನು ಇವರ ಅನುಭವದಲ್ಲಿಯೇ ನೀಡುತ್ತಿದ್ದವರು. ಕಟ್ಟಡದ ನೀಲನಕಾಶೆಯ ಬಗ್ಗೆ ಇಂಜಿನಿಯರ್ ಅವರಿಗೆ ಈ ರೀತಿ ಆಗಬೇಕೆಂದು ತಿಳಿಸುತ್ತಿದ್ದರು…
ಡಾಕ್ಟ್ರೇ ನನ್ನ ಲೆಕ್ಕಾಚಾರದಲ್ಲಿ ನೀವು ವಾಸ್ತು ತಜ್ಞರು , ಇಂಜಿನಿಯರು, ವೈದ್ಯರು ಹೌದು…

ಕಾಲ ನಿರ್ಣಯ ಎಂಬಂತೆ
ಇಂತಹ ಮಹಾ ಚೇತನ ನಮ್ಮಿಂದ
26 ಸೆಪ್ಟೆಂಬರ್ 2021 ರಂದು ಮರೆಯಾಯಿತು… ಇವರ ಅಂತಿಮ ದಿನದ ಘನ ಘೋರ ನಿರ್ಧಾರವು ಊರಿಗೆ ಊರೇ ಕಣ್ಣೀರು ಸುರಿಸುವಂತೆ ಮಾಡಿತು.

ನೀವು ದೂರವಾಗಿ ವರ್ಷ ಐದು ಕಳೆದರೂ ನಿಮ್ಮ ನೆನಪು ನಮ್ಮಿಂದ ಬಿಟ್ಟು ಹೋಗುತ್ತಿಲ್ಲ ಕಾರಣ ನಿಮ್ಮ ಪ್ರೀತಿ ವಾತ್ಸಲ್ಯ…. ನೀವೇ ಹೇಳಿದ ಮಾತು ನೆನಪಾಗುತ್ತದೆ ವ್ಯಕ್ತಿ ಮಾತಾಡುವುದು ಕಡಿಮೆಯಾಗಬೇಕು ವ್ಯಕ್ತಿತ್ವ ಸಾಧಿಸುವುದು ಹೆಚ್ಚಾಗಬೇಕು ಎಂದು…
ಅಗಲಿರುವ ನಿಮ್ಮ ನೆನಪಿಗಾಗಿ ನಿಮ್ಮ ಆತ್ಮೀಯ ಒಡನಾಡಿ ರೋಯಲ್ ರತ್ನಾಕರ್ ಡಿ ಶೆಟ್ಟಿರವರು ನಿಮ್ಮ ಮನೆಯ ಎದುರುಗಡೆಯ ಬಸ್ಸು ತಂಗುದಾಣಕ್ಕೆ ನಿಮ್ಮ ಹೆಸರಿಟ್ಟು ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ನಮ್ಮ ಉಪಸ್ಥಿತಿಯು ಒಂದು ಮಹಾಭಾಗ್ಯ ಎನಿಸಿದೆ. ನಿಮ್ಮನ್ನು ಇಷ್ಟಪಟ್ಟು ನಿಮ್ಮ ಅಭಿಮಾನಿಗಳೆಲ್ಲರೂ ಒಂದೆಡೆ ಸೇರಿ ನಿಮ್ಮ ಸುಧೀರ್ಘ ಜೀವನದ ತುಣುಕುಗಳನ್ನೆಲ್ಲ ನೆನಪಿಸಿಕೊಳ್ಳುವಂತಾಯಿತು…‌

ಡಾಕ್ಟ್ರೇ ನೀವು ಹಾಕಿಕೊಟ್ಟ ಬದುಕಿನ ಹೆಜ್ಜೆ ನಮಗೆಲ್ಲ ಸಾಧನೆಗೆ ಸ್ಪೂರ್ತಿ….. ನಿಮ್ಮ ಮಾರ್ಗದರ್ಶನ ನಮಗೆ ನಿತ್ಯ ದಾರಿದೀಪ…. ನೀವು ನಮ್ಮ ಮಹಾತ್ಮರು, ಮತ್ತೆ ಹುಟ್ಟಿ ಬನ್ನಿ ನಮ್ಮೂರಿಗೆ ನಮ್ಮೊಂದಿಗೆ…..

ಬರಹ: ಸಂದೀಪ್ ಶೆಟ್ಟಿ ಅಮ್ಮುಂಜೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now