ಅಜ್ಜರಕಾಡು ಜಿಲ್ಲಾಸ್ಪತ್ರೆಯ ಅಪೂರ್ಣ ಕಾಮಗಾರಿಗಳ ನಡುವೆ ಉದ್ಘಾಟನೆ : ನಮ್ಮ ಕರ್ನಾಟಕ ಸೇನೆಯ ತೀವ್ರ ವಿರೋಧ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಅಪೂರ್ಣ ಕಾಮಗಾರಿಗಳ ನಡುವೆ ಉದ್ಘಾಟನೆ : ನಮ್ಮ ಕರ್ನಾಟಕ ಸೇನೆಯ ತೀವ್ರ ವಿರೋಧ
0Shares

ಉಡುಪಿ : ಅಜ್ಜರಕಾಡಿನ ನೂತನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸುಮಾರು ₹110 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗಿದ್ದು, ಸುಮಾರು 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯ ಎಲ್ಲಾ ಕಾಮಗಾರಿಗಳು ಹಾಗೂ ವೈದ್ಯಕೀಯ ಸೌಲಭ್ಯಗಳು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಅಜ್ಜಪ್ಪರು ಜಿಲ್ಲಾ ಆಸ್ಪತ್ರೆಯ ಅಪೂರ್ಣ ಕಾಮಗಾರಿಗಳ ನಡುವೆ ಉದ್ಘಾಟನೆ ಮಾಡಿದರೆ ನಮ್ಮ ತೀವ್ರ ವಿರೋಧ ಇದೆ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ ತಿಳಿಸಿದ್ದಾರೆ.

ಆಸ್ಪತ್ರೆಯ ಕಟ್ಟಡ ದೊಡ್ಡದಾಗಿ ನಿರ್ಮಾಣವಾದರೆ ಮಾತ್ರ ಸಾಲದು. ಅಲ್ಲಿ ಬಡ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳು ಇರಬೇಕು. ಅಗತ್ಯ ವೈದ್ಯರು, ನರ್ಸ್‌ಗಳು, ತಜ್ಞ ವೈದ್ಯಕೀಯ ಸಿಬ್ಬಂದಿ, ಡಿ-ಗ್ರೂಪ್ ನೌಕರರು ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳ್ಳಬೇಕು.

ಅದೇ ರೀತಿ ಸ್ಕ್ಯಾನಿಂಗ್ ಯಂತ್ರಗಳು, ಡಯಾಲಿಸಿಸ್ ಯಂತ್ರಗಳು ಸೇರಿದಂತೆ ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಬೇಕು. ಹಳೆಯದಾಗಿ ಹಾಳಾಗಿರುವ ಅಥವಾ ಸಮರ್ಪಕವಾಗಿ ಕಾರ್ಯನಿರ್ವಹಿಸದ ಡಯಾಲಿಸಿಸ್ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಅಳವಡಿಸಬೇಕು.

ಸುಮಾರು 250 ಹಾಸಿಗೆಗಳ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ವೈದ್ಯರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು. ಸಿಬ್ಬಂದಿ ಕೊರತೆಯೊಂದಿಗೆ ಆಸ್ಪತ್ರೆಯನ್ನು ಉದ್ಘಾಟಿಸುವುದರಿಂದ ಬಡ ರೋಗಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.

ನಮ್ಮ ಕರ್ನಾಟಕ ಸೇನೆಯ ಪ್ರಮುಖ ಆಗ್ರಹಗಳು:

  1. ಆಸ್ಪತ್ರೆಯ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು.
  2. ಅಗತ್ಯವಿರುವ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿ ಮಾಡಬೇಕು.
  3. ಎಲ್ಲಾ ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಿ ಕಾರ್ಯಾರಂಭಕ್ಕೆ ಸಿದ್ಧಪಡಿಸಬೇಕು.
  4. ಹಳೆಯ ಮತ್ತು ಕೆಟ್ಟ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಅಳವಡಿಸಬೇಕು.
  5. ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು.
  6. 250 ಹಾಸಿಗೆಗಳ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಒದಗಿಸಬೇಕು.

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಅಥವಾ ತರಾತುರಿಯಲ್ಲಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಬಾರದು. ಉಡುಪಿ ಜಿಲ್ಲೆಯ ಬಡವರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು ಎಂಬುದೇ ನಮ್ಮ ಉದ್ದೇಶ.

ಆಸ್ಪತ್ರೆ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಮತ್ತೆ ಸಮಸ್ಯೆ ಎದುರಿಸುವಂತಾಗಬಾರದು. ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ದೀರ್ಘಕಾಲ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುವಂತೆ ಸಿದ್ಧವಾಗಬೇಕು.

ಆದ್ದರಿಂದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆಸ್ಪತ್ರೆಯ ಎಲ್ಲಾ ಸೌಲಭ್ಯಗಳು ಸಂಪೂರ್ಣವಾಗಿ ಸಿದ್ಧವಾದ ನಂತರವೇ ಉದ್ಘಾಟನೆ ಮಾಡಬೇಕೆಂದು ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲೆ ಆಗ್ರಹಿಸುತ್ತದೆ.

ಇಲ್ಲವಾದಲ್ಲಿ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತೇವೆ.

ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧದ ಹೋರಾಟವಲ್ಲ; ಉಡುಪಿ ಜಿಲ್ಲೆಯ ಬಡ ಜನರ ಆರೋಗ್ಯದ ಹಕ್ಕಿಗಾಗಿ ನಡೆಯುವ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now