
ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ನಲ್ಲಿ ವ್ಯಕ್ತಿಯೊಬ್ಬರಿಗೆ ಬೊಲೆರೋ ಜೀಪಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಗದೀಶ್ ಜೈನ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ನ. 9ರಂದು ಸಂಜೆ ಮಾಣಿ ಜಂಕ್ಷನ್ನಲ್ಲಿರುವ ಮೈದಾನದ ಬಳಿಯ ಪಟಾಕಿ ಅಂಗಡಿ ಸಮೀಪ ಬಂಟ್ವಾಳ ಮಾಣಿ ನಿವಾಸಿ ವಿಕೇಶ್ ಕೆ. (32) ಅವರು ನಿಂತಿದ್ದ ವೇಳೆ, ಪರಿಚಿತನಾದ ಜಗದೀಶ್ ಜೈನ್ ಎಂಬಾತ ಬೊಲೆರೋ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ವಿಕೇಶ್ ಅವರು ಜೀಪಿನ ಬಾನೆಟ್ ಮೇಲೆ ಹಾರಿ ಪಕ್ಕದಲ್ಲಿದ್ದ ಮಣ್ಣಿನ ಮೇಲೆ ಬಿದ್ದಿದ್ದಾರೆ. ಘಟನೆಯಲ್ಲಿ ಅವರ ಎಡಕಾಲಿನ ಮೊಣಕಾಲಿಗೆ ಗಾಯವಾಗಿದೆ. ಇದೇ ಸಂದರ್ಭದಲ್ಲಿ ವಿಕೇಶ್ ಅವರ ಸಂಬಂಧಿ ತೀರ್ಥಪ್ರಸಾದ್ ಅವರಿಗೂ ಜೀಪಿನಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ಕೂಡ ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳದಲ್ಲಿ ಜನರು ಸೇರುತ್ತಿರುವುದನ್ನು ಕಂಡ ಆರೋಪಿ, ವಿಕೇಶ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 232/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109, 118(1), 352 ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಿಯಾದ ಜಗದೀಶ್ ಜೈನ್ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now