
ಉಡುಪಿ : ಕಕ್ಕುಂಜೆ-ಅಂಬಾಗಿಲು ಬೇರುಗಳಿಂದ ಆರಂಭವಾದ ಕರ್ನೆಲಿಯೋ ಕುಟುಂಬದ ಭವಿಷ್ಯದ ಹೊಸ ಅಧ್ಯಾಯ ಆರಂಭವಾಗಿದೆ. ಪರಂಪರೆ, ಪ್ರೀತಿ ಮತ್ತು ರಕ್ತಸಂಬಂಧದ ಮಹತ್ವವನ್ನು ಸಾರುವ ಅಪರೂಪದ ಕ್ಷಣವೊಂದಕ್ಕೆ ಇತ್ತೀಚೆಗೆ ನಗರದ ಕಲ್ಸಂಕದ ಮಾಂಡವಿ ಟೈಮ್ ಸ್ಕ್ವೇರ್ ನ ಹೋಟೆಲ್ ಓಷನ್ ಪರ್ಲ್ ಸಭಾಂಗಣ ಸಾಕ್ಷಿಯಾಯಿತು. ತಮ್ಮ ಮೂಲ ಬೇರುಗಳನ್ನು ನೆನಪಿಸಿಕೊಳ್ಳುತ್ತಾ, ಕರ್ನೇಲಿಯೊ ಉಪನಾಮ ಹೊಂದಿರುವ ಸಮಸ್ತ ಕುಟುಂಬಸ್ಥರೆಲ್ಲರೂ ಒಂದೇ ವೇದಿಕೆಯಡಿ ಒಗ್ಗೂಡಿ ‘ಕರ್ನೇಲಿಯೊ ಫ್ಯಾಮಿಲಿ ಗೆಟ್-ಟುಗೆದರ್’ (Cornelio Family Get-Together) ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಯಶಸ್ಸಿನಿಂದ ಆಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ, ಧರ್ಮ ಪ್ರಾಂತ್ಯಕ್ಕೆ ಕರ್ನೆಲಿಯೋ ಕುಟುಂಬದ ಸೇವೆ ವಿಶೇಷವಾದುದು. ಈ ನಿಮ್ಮ ಪ್ರಯತ್ನ ಇಲ್ಲಿಗೆ ನಿಲ್ಲದಿರಲಿ, ಕುಟುಂಬದ ಎಲ್ಲ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಯಶಸ್ವಿಯಾಗಲಿ. ಧರ್ಮ ಪ್ರಾಂತ್ಯದ ವಿವಿಧ ಯೋಜನೆಗಳಿಗೆ ತಮ್ಮ ಸಹಕಾರ ಮುಂದೆಯೂ ಇರಲಿ ಎಂದು ಆಶಿಸಿದರು.

ಕರ್ನೇಲಿಯೋ ಮೂಲ ಬೇರು: ಕಕ್ಕುಂಜೆ – ಅಂಬಾಗಿಲು
ಕರ್ನೇಲಿಯೊ ಮನೆತನದ ಇತಿಹಾಸ ಆರಂಭವಾಗುವುದು ಕಕ್ಕುಂಜೆ–ಅಂಬಾಗಿಲು ಮಣ್ಣಿನಿಂದ. ಆ ಪುಣ್ಯಭೂಮಿಯಲ್ಲಿ ಚಿಗುರೊಡೆದ ಈ ವಂಶವೃಕ್ಷ ಇಂದು ಹಲವು ದಿಕ್ಕುಗಳಲ್ಲಿ ಹರಡಿಕೊಂಡಿದೆ. ದೇಶ-ವಿದೇಶಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಒಂದೆಡೆ ಸೇರಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಮೊದಲ ಬಾರಿಗೆ ಸಮಗ್ರ ಕುಟುಂಬದ ಮಿಲನ
ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನೇಲಿಯೊ ಕುಟುಂಬದ ಹಿರಿಯರು, ಕಿರಿಯರು, ಮಕ್ಕಳು ಹೀಗೆ ಪ್ರತಿಯೊಬ್ಬರೂ ಒಂದೆಡೆ ಸೇರಿದ್ದು ಈ ಕೂಟದ ಪ್ರಮುಖ ಹೆಗ್ಗಳಿಕೆ.

ಹಿರಿಯರು ತಮ್ಮ ಬಾಲ್ಯದ ದಿನಗಳು, ಹಳೆಯ ನೆನಪುಗಳು ಹಾಗೂ ಕುಟುಂಬದ ಇತಿಹಾಸವನ್ನು ಮೆಲುಕು ಹಾಕಿದರು. ಪರಸ್ಪರ ಪರಿಚಯವಿಲ್ಲದ ಯುವ ಪೀಳಿಗೆ ಹಾಗೂ ಮಕ್ಕಳು ತಮ್ಮ ಮೂಲ ಮತ್ತು ಸಂಬಂಧಿಕರನ್ನು ಅರಿತುಕೊಳ್ಳಲು ಇದೊಂದು ಅದ್ಭುತ ವೇದಿಕೆಯಾಯಿತು. ನಗು, ಮಾತುಕತೆ, ಊಟೋಪಚಾರ ಹಾಗೂ ಸಾಂಸ್ಕೃತಿಕ ವಾತಾವರಣ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.

ಮುಂದಿನ ಕನಸುಗಳು ಮತ್ತು ದೃಷ್ಟಿಕೋನಕ್ಕೆ ಕೇವಲ ಒಂದು ದಿನದ ಭೇಟಿಯಾಗಿ ಉಳಿಯದೆ, ಭವಿಷ್ಯದ ದೊಡ್ಡ ಗುರಿಗಳಿಗೆ ಮುನ್ನುಡಿಯಾಗಿದೆ.
ಕುಟುಂಬದ ಸದಸ್ಯರ ನಡುವೆ ನಿರಂತರ ಸಂಪರ್ಕ ಮತ್ತು ಸೌಹಾರ್ದತೆ ಬೆಳೆಸುವುದು.
ಯುವ ಪೀಳಿಗೆಯ ಶಿಕ್ಷಣ, ವೃತ್ತಿಜೀವನ ಮತ್ತು ವೈಯಕ್ತಿಕ ಬೆಳವಣಿಗೆಗೆ ಪರಸ್ಪರ ಬೆನ್ನೆಲುಬಾಗಿ ನಿಲ್ಲುವುದು.
ಸಮಾಜಮುಖಿ ಕಾರ್ಯಗಳು ಹಾಗೂ ಕುಟುಂಬದ ಅಭಿವೃದ್ಧಿಗಾಗಿ ಒಟ್ಟಾಗಿ ಯೋಜನೆಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಕನಸಾಗಿತ್ತು.

ಕಾರ್ಯಕ್ರಮದ ಸಂಘಟಕ ಮೆಲ್ವಿನ್ ಕರ್ನೆಲಿಯೋ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಕರ್ನೇಲಿಯೋ ಕುಟುಂಬದ, ಸಾಧನೆ ಮಾಡಿದ ಹಿರಿಯ ಕಿರಿಯ ಸದಸ್ಯರನ್ನು ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಟುಂಬ ಸದಸ್ಯ ಮತ್ತು ಪಡುಕೋಣೆ ಚರ್ಚಿನ ಧರ್ಮಗುರು ವO. ಫಾ. , ಫ್ರಾನ್ಸಿಸ್ ಕರ್ನೆಲಿಯೋ ಆಶೀರ್ವಚನ ನೆರವೇರಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆಗೆ ಮುನ್ನಡೆ ಇಟ್ಟ ಮೇಲ್ವಿನ್ ಕರ್ನೇಲಿಯೋ ಮತ್ತು ಜೆನಿಫರ್ ಕರ್ನೇಲಿಯೋ ದಂಪತಿಗಳನ್ನು ಸನ್ಮಾನಿಸಲಾಯಿತು.

ಪ್ರಸಿದ್ಧ ವಂಶಾವಳಿ ತಜ್ಞ, ವಿಜ್ಞಾನಿ ಡಾ. ಮೈಕಲ್ ಲೋಬೊ, ಉದ್ಯಮಿ ವಿಲ್ಸನ್ ಫೆರ್ನಾಂಡಿಸ್, ಪ್ರಮುಖರಾದ ವೆರೋನಿಕ ಕರ್ನೆಲಿಯೋ, ಡಾ. ನೇರಿ ಕರ್ನೆಲಿಯೋ, ಹಿಲ್ಡಾ ಕರ್ನೇಲಿಯೋ, ಸ್ಟೇಫನ್ ಕರ್ನೆಲಿಯೋ, ಐಡಾ ಕರ್ನೇಲಿಯೋ, ಥಾಮಸ್ ಕರ್ನೇಲಿಯೋ, ಮತ್ತಿತರರು ಉಪಸ್ಥಿತರಿದ್ದರು.
ಸಂಘಟನಾ ಸಮಿತಿ ಸದಸ್ಯ ಸಂತೋಷ್ ಕರ್ನೆಲಿಯೋ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮವನ್ನು ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.




ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now