ವೈದ್ಯಕೀಯ ಶಿಬಿರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ನೌಕಾಪಡೆಯಿಂದ ಸನ್ಮಾನ

ವೈದ್ಯಕೀಯ ಶಿಬಿರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ನೌಕಾಪಡೆಯಿಂದ ಸನ್ಮಾನ
0Shares

ಕಾರವಾರ: ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರನ್ನು ಭಾರತೀಯ ನೌಕಾಪಡೆ ಗೌರವಿಸಿ ಸನ್ಮಾನಿಸಿದೆ.

ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೌಕಾಪಡೆ ಆಯೋಜಿಸಿದ್ದ ವೈದ್ಯಕೀಯ ಶಿಬಿರಗಳ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ ಆಶಾ ಕಾರ್ಯಕರ್ತೆಯರನ್ನು ಕರ್ನಾಟಕ ನೌಕಾ ವಲಯದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಅವರ ಪರವಾಗಿ ಕಮಾಂಡರ್ ಕೆ. ಅನಂತರಾಜ್ ಮಾತನಾಡಿ, ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ. ಅವರ ಶ್ರಮ ಮತ್ತು ಸಮರ್ಪಣೆಯಿಂದ ವೈದ್ಯಕೀಯ ಶಿಬಿರಗಳು ಯಶಸ್ವಿಯಾಗಿ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.

ಇತ್ತೀಚಿನ ತಿಂಗಳುಗಳಲ್ಲಿ ನೌಕಾಪಡೆ ಆಯೋಜಿಸಿದ್ದ ವೈದ್ಯಕೀಯ ಶಿಬಿರಗಳಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡು, ಸಾರ್ವಜನಿಕರಿಗೆ ಆರೋಗ್ಯ ಶಿಬಿರಗಳ ಕುರಿತು ಮಾಹಿತಿ ನೀಡುವುದು, ಜನರನ್ನು ಶಿಬಿರಗಳಿಗೆ ಕರೆತರುವುದು ಸೇರಿದಂತೆ ಹಲವು ರೀತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಸಹಕಾರದಿಂದ ಸಾವಿರಾರು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸ್ಮರಿಸಿ, ನೌಕಾಪಡೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸ್ಥಳೀಯ ಸಮುದಾಯದ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗೆ ಭಾರತೀಯ ನೌಕಾಪಡೆ ಬದ್ಧವಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾರಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now