ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಶಿಕ್ಷಣದ ಜೊತೆಗೆ ಮೌಲ್ಯಗಳೂ ಅಗತ್ಯ : ಪ್ರಮೋದ ನಾಯ್ಕ

ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಶಿಕ್ಷಣದ ಜೊತೆಗೆ ಮೌಲ್ಯಗಳೂ ಅಗತ್ಯ : ಪ್ರಮೋದ ನಾಯ್ಕ
0Shares

ಕುಮಟಾ : ತಪ್ಪುಗಳನ್ನು ತೋರಿಸಿ ತಿದ್ದುವವರು ಇದ್ದಾಗ ಮಾತ್ರ ವ್ಯಕ್ತಿ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಕುಟುಂಬ, ನೆರೆಹೊರೆ, ಸಮಾಜ ಹಾಗೂ ವಿವಿಧ ರೀತಿಯ ಬಾಂಧವ್ಯಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಮಾಜದ ಪ್ರಭಾವದಿಂದಲೇ ನಾವು ಸಮಾಜ ಜೀವಿಗಳಾಗಿ ಬದುಕುತ್ತಿದ್ದೇವೆ ಎಂದು ಉಪನ್ಯಾಸಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕುಮಟಾ ಘಟಕದ ಅಧ್ಯಕ್ಷ ಪ್ರಮೋದ ನಾಯ್ಕ ಅಭಿಪ್ರಾಯಪಟ್ಟರು.

ಅವರು ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ನಾಯಕತ್ವ, ಜವಾಬ್ದಾರಿ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶಾಲಾ ಸಂಸತ್ ಕೇವಲ ಹುದ್ದೆ ಅಲಂಕರಿಸುವ ವೇದಿಕೆಯಲ್ಲ, ಅದು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಾಯೋಗಿಕ ವ್ಯವಸ್ಥೆಯಾಗಿದೆ ಎಂದು ಅವರು ತಿಳಿಸಿದರು.

ಸರಸ್ವತಿ ವಿದ್ಯಾಧಿದೇವತೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳನ್ನು ದಾಖಲಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಂಸ್ಥಾಪಕರ ದೂರದೃಷ್ಟಿ, ಪರಿಶ್ರಮ ಮತ್ತು ಸೇವಾಭಾವ ಸದಾ ಸ್ಮರಣೀಯವಾಗಿದ್ದು, ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾಗಿದೆ ಎಂದು ಅವರು ಪ್ರಶಂಸಿಸಿದರು.

ಶಿಕ್ಷಣವೇ ಜೀವನದ ನಿಜವಾದ ಸಂಪತ್ತು. ಶಿಕ್ಷಣವಿಲ್ಲದ ಜೀವನ ಅನೇಕ ಸವಾಲುಗಳಿಂದ ಕೂಡಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮಹತ್ವವನ್ನು ಅರಿತು ಜ್ಞಾನಾರ್ಜನೆಯೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ 2026–27ನೇ ಸಾಲಿನ ಶಾಲಾ ಸಂಸತ್ತಿಗೆ ಶ್ರೀಷ್ ಹೆಗಡೆ, ಪೂರ್ವಿ ಗೌಡ, ಅಮೋಘ ಭಟ್, ಲಿಖಿತ್ ಕೊಚರೇಕರ್, ತನುಷ್ ನಾಯ್ಕ ಹಾಗೂ ಇಶಾ ಭಂಡಾರಿ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮುಖ್ಯಶಿಕ್ಷಕಿ ಸುಜಾತಾ ನಾಯ್ಕ ಅವರು ಸ್ವಾಗತಿಸಿ, ಶಾಲಾ ಸಂಸತ್ತಿನ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಸರಸ್ವತಿ ವಿದ್ಯಾ ಕೇಂದ್ರ ಆಂಗ್ಲಮಾಧ್ಯಮದ ಮುಖ್ಯೋಪಾಧ್ಯಾಯ ಗಣೇಶ ಜೋಶಿ, ಬಾಲಮಂದಿರದ ಮುಖ್ಯಶಿಕ್ಷಕಿ ಸಾವಿತ್ರಿ ಹೆಗಡೆ ಸೇರಿದಂತೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗೌರೀಶ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಹರ್ಷಿತಾ ಭಂಡಾರಿ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸುವರ್ಣಾ ಮಯ್ಯರ್ ವಂದನಾರ್ಪಣೆ ಗೈದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now