
ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಶ್ರೀ ಶೇಷಪ್ಪ ಬೈದ್ಯಮನೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಹಾಗೂ ಅವರ ತಂಡವನ್ನು ಅಭಿನಂದಿಸಿದರು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು, ಎಸ್.ಆರ್.ಆರ್. ಮಸಾಲಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಗುರು ಚಾರಿಟೇಬಲ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಶ್ರೀ ಶೈಲೇಂದ್ರ ವೈ. ಸುವರ್ಣ, ಸೆಂಟ್ ಅಲೋಶಿಯಸ್ ಪಿಯು ಕಾಲೇಜಿನ ಪ್ರಾಧ್ಯಾಪಕರು ಶ್ರೀ ಮೋಹನ್ ರಾಜ್, ಕೆನರಾ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಶ್ರೀಮತಿ ಗೀತಾ ಯಶೋಧರ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಗಣೇಶ್ ಕೆ. ಮಹಾಕಾಳಿ, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯದ ಅಧ್ಯಕ್ಷ ಶ್ರೀ ಗೋಪಾಲ ಎಸ್. ಕೊಂಡಾಣ ಹಾಗೂ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಉದಯ್ ಕುಂಪಲ ಉಪಸ್ಥಿತರಿದ್ದರು.
ಆಯ್ಕೆ ಸಮಿತಿ ಸಂಚಾಲಕಿ ಶ್ರೀಮತಿ ಸುಧಾ ಸುರೇಶ್ ಅವರು 2026–27ನೇ ಸಾಲಿನ ನಿಯೋಜಿತ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಪ್ರಕಟಿಸಿದರು. ಬಳಿಕ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಶ್ರೀ ಅಶೋಕ್ ಕುಮಾರ್ ಪಡ್ಪು,ಇವರು ನೂತನ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಜೀವನ್ ಕಾಸಿಂಬೆಟ್ಟು ಮಾತನಾಡಿ, ಘಟಕವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರವನ್ನು ಕೋರಿದರು.

ಮುಖ್ಯ ಅತಿಥಿ ಶ್ರೀಮತಿ ಗೀತಾ ಯಶೋಧರ್ ಮಾತನಾಡಿ, ಹಿರಿಯರು ಹಾಕಿಕೊಟ್ಟ ಆದರ್ಶಗಳನ್ನು ಮುಂದುವರಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ. ಶ್ರೀ ನಾರಾಯಣ ಗುರುಗಳ ಸಂದೇಶಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಶ್ರೀ ಮೋಹನ್ ರಾಜ್ ಮಾತನಾಡಿ, ಯುವವಾಹಿನಿಯ ಶಿಸ್ತು ಹಾಗೂ ಸಂಘಟನಾ ಕಾರ್ಯವೈಖರಿಯನ್ನು ಮೆಚ್ಚಿ, ನಮ್ಮ ಸಂಸ್ಕೃತಿ ಮತ್ತು ನಮ್ಮತನವನ್ನು ಉಳಿಸಿಕೊಂಡು ಸನಾತನ ಧರ್ಮದ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಯುವಜನತೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಶ್ರೀ ಶೈಲೇಂದ್ರ ವೈ. ಸುವರ್ಣ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹುಡುಗಿಯರು ಹೆಚ್ಚಿನ ಸಾಧನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಹುಡುಗರೂ ಶಿಕ್ಷಣದಲ್ಲಿ ಮುನ್ನಡೆಯುವಂತೆ ಯುವವಾಹಿನಿ ಪ್ರೇರಣೆ ನೀಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಕೊಲ್ಯ ಘಟಕದ ಒಂಬತ್ತು ವರ್ಷಗಳ ಸಾಧನೆಗೆ ಕೇಂದ್ರ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಘಟಕದ ವಾರ್ಷಿಕ ವರದಿಯನ್ನು ಮೆಚ್ಚಿದ ಅವರು, ಯುವಜನತೆಯ ಬಗ್ಗೆ ಸಮಾಜದಲ್ಲಿ ಇರುವ ಅಪವಾದಗಳ ನಡುವೆಯೂ ಯುವವಾಹಿನಿ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುತ್ತಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರನ್ನು ಸಂಘಟಿಸಿ ಸಮಾಜ ಸೇವೆಯಲ್ಲಿ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಘಟಕದ ಸದಸ್ಯರ 12 ಮಕ್ಕಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಘಟಕದ ಸೇವಾ ಯೋಜನೆ ಮತ್ತು ಸದಸ್ಯರ ಸಹಕಾರದಿಂದ ಸಂಗ್ರಹಿಸಲಾದ ₹1,43,000 ರೂಪಾಯಿ ವಿದ್ಯಾನಿಧಿಯನ್ನು ಅಗತ್ಯ ಇರುವ ಘಟಕದ ಹಾಗೂ ಸಮಾಜದ ಒಟ್ಟು 20 ವಿದ್ಯಾರ್ಥಿಗಳಿಗೆ ವಿತರಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.
ಕಲಾ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಂಗಾಧರ್ ಕುಜುಮಗದ್ದೆ ಹಾಗೂ ಜನಪದ ಕ್ಷೇತ್ರದ ಸಾಧಕಿ ಶ್ರೀಮತಿ ವಸಂತಿ ಅಮೀನ್ ಅವರನ್ನು ಅಭಿನಂದಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ಅಪೂರ್ವ ಆರ್. ಕೆಂಜಾರು ಹಾಗೂ ಡಾ. ಅನ್ವಿತಾ ಜಗಜೀವನ್ ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕರಾವಳಿಯ ಅನರ್ಘ್ಯ ರತ್ನ, ಕೀರ್ತಿಶೇಷ ರಮಾನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣೆಯು ಶ್ರೀ ಲತೀಶ್ ಸಂಕೋಳಿಗೆ ಇವರ ಸಂಚಾಲಕತ್ವದಲ್ಲಿ ಹಾಗೂ ಪ್ರಾಯೋಜಕರು ಶ್ರೀಮತಿ ಆಶಾ ರಮಾನಾಥ್ ಕೋಟೆಕಾರ್ ಇವರ ಉಪಸ್ಥಿತಿಯಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ಮೆಚ್ಚುಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜಸೇವೆ ಹಾಗೂ ಸಾಹಿತ್ಯ ಪ್ರೋತ್ಸಾಹಕ್ಕಾಗಿ ಶ್ರೀಮತಿ ಆಶಾ ರಮಾನಾಥ್ ಕೋಟೆಕಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಗಣೇಶ್ ಕೆ. ಮಹಾಕಾಳಿ, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯದ ಅಧ್ಯಕ್ಷ ಶ್ರೀ ಗೋಪಾಲ ಎಸ್. ಕೊಂಡಾಣ ಹಾಗೂ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಉದಯ್ ಕುಂಪಲ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಹಾಗೂ ಅವರ ತಂಡವನ್ನು ಅಭಿನಂದಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. 2025–26ನೇ ಸಾಲಿನ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಹಾಗೂ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಯೋಗೀಶ್ ಅವರನ್ನು ಅಭಿನಂದಿಸಲಾಯಿತು.
ಕಳೆದ ಒಂದು ವರ್ಷದ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳಿಗೆ ಅಧ್ಯಕ್ಷರು ಶಾಲು, ನೆನಪಿನ ಕಾಣಿಕೆ ನೀಡಿ ಧನ್ಯವಾದ ತಿಳಿಸಿದರು ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಘಟಕಗಳ ಅಧ್ಯಕ್ಷರಿಗೆ, ಶಾಲು ಹಾಕಿ ಗೌರವಿಸಲಾಯಿತು.
“ಬೇಗ ಬನ್ನಿ – ಬಹುಮಾನ ಗೆಲ್ಲಿ” ಅದೃಷ್ಟ ಚೀಟಿ ಮೂಲಕ ಬಹುಮಾನ ವಿತರಣೆಯಲ್ಲಿ ಘಟಕದ ಶ್ರೀ ರಘುರಾಮ್ ಸುವರ್ಣ ಹಾಗೂ ಶ್ರೀ ಕುಸುಮಾಕರ್ ಕುಂಪಲ ಅವರು ವಿಜೇತರಾದರು.
ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಘಟಕದ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕುಮಾರಿ ಯಶಿಕ ಪರ್ಯಾತ್ತೂರು, ಕುಮಾರಿ ಉನ್ನತಿ ಪರ್ಯಾತ್ತೂರು ಹಾಗೂ ಕುಮಾರಿ ಭೂಮಿಕಾ ಆರ್. ಸುವರ್ಣ ಅವರು ಪ್ರಾರ್ಥನೆ ಸಲ್ಲಿಸಿದರು.ಅಧ್ಯಕ್ಷರು ಶ್ರೀ ನಿತಿನ್ ಕರ್ಕೇರ ಸ್ವಾಗತಿಸಿದರು,
ಕಾರ್ಯದರ್ಶಿ ಶ್ರೀಮತಿ ಸೌಮ್ಯ ಯೋಗೀಶ್ ಅವರು ಗತಸಭೆಯ ವರದಿ ಮಂಡಿಸಿದರು. ದ್ವಿತೀಯ ಉಪಾಧ್ಯಕ್ಷ ಶ್ರೀ ಜೀವನ್ ಬೆರಿಕೆ ಪ್ರಸ್ತಾವನೆಗೈದರು. ನೂತನ ಕಾರ್ಯದರ್ಶಿ ಶ್ರೀ ಮುಕೇಶ್ ಕಿನ್ಯ ಧನ್ಯವಾದ ಸಲ್ಲಿಸಿದರು. ಶ್ರೀ ಲತೀಶ್ ಎಂ ಸಂಕೋಳಿಗೆ, ಶ್ರೀಮತಿ ರಶ್ಮಿತಾ ಸನಿಲ್ ಹಾಗೂ ಕುಮಾರಿ ಯಶಿಕ ಪರ್ಯಾತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now