ಪ್ರಗತಿಪರ ಚಿಂತನೆಯ ಯತಿಗಳೆಂದರೆ ಪೇಜಾವರಶ್ರೀ:ಈಶ್ವರ ಖಂಡ್ರೆ

ಪ್ರಗತಿಪರ ಚಿಂತನೆಯ ಯತಿಗಳೆಂದರೆ ಪೇಜಾವರಶ್ರೀ:ಈಶ್ವರ ಖಂಡ್ರೆ
0Shares

ನೀಲಾವರ (ಉಡುಪಿ), ಮೇ 25: ಪೇಜಾವರ ಮಠದ ಪೀಠಾಧಿಪತಿಗಳಾಗಿದ್ದ ಕೀರ್ತಿಶೇಷ ಪೇಜಾವರ ಶ್ರೀಗಳು ತಮ್ಮ ಪ್ರಗತಿಪರ ಚಿಂತನೆಗಳಿಂದ ನಾಡಿನ ಜನರ ಮನಗೆದ್ದಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಉಡುಪಿ ಬಳಿಯ ನೀಲಾವರದಲ್ಲಿ ಪೇಜಾವರ ಶ್ರೀಗಳ ಸ್ಮೃತಿವನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ, ಪರಿಸರ ಸಂರಕ್ಷಣೆಯ ಕ್ಷೇತ್ರಕ್ಕೂ ಶ್ರೀಗಳು ನೀಡಿರುವ ಕೊಡುಗೆ ಅಪಾರವಾದ್ದು, ಅವರು ನಕ್ಸಲರ ಮನವೊಲಿಸುವ ಕಾರ್ಯವನ್ನೂ ಮಾಡಿದ್ದರು, ಶಾಂತಿಯನ್ನು ಪ್ರತಿಪಾದಿಸುತ್ತಿದ್ದರು ಎಂದರು.

1 ಕೋಟಿ ರೂ. ಅನುದಾನದ ಭರವಸೆ:

33ನೇ ಯತಿಗಳಾಗಿದ್ದ ಶ್ರೀ ಪೇಜಾವರ ಶ್ರೀಗಳ ಹೆಸರಿನ ಸ್ಮೃತಿವನ ಉದ್ಘಾಟಿಸುತ್ತಿರುವುದು ತಮ್ಮ ಸೌಭಾಗ್ಯ ಎಂದ ಅವರು, ನೀಲಾವರದ ಸ್ಮೃತಿವನದ ಸಮೀಪದಲ್ಲೇ 2 ಎಕರೆ ಪ್ರದೇಶದಲ್ಲಿ ಮತ್ತೊಂದು ವನ ನಿರ್ಮಿಸಲು ಮುಂದಾಗಿರುವ ಮಠಕ್ಕೆ 1 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು. ಇದೇ ವೇಳೆ ಕಳೆದ ಆರು ತಿಂಗಳ ಹಿಂದೆ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲೂ ಸ್ಮೃತಿವನ ಉದ್ಘಾಟಿಸಿದ್ದನ್ನು ಸ್ಮರಿಸಿದರು.

ಪಶ್ಚಿಮಘಟ್ಟ ಸಂರಕ್ಷಣೆ ಘಟ್ಟಪ್ರದೇಶದ ಎಲ್ಲರ ಹೊಣೆ:

ಪ್ರಕೃತಿ ಪರಿಸರ ಉಳಿದರೆ ಮಾತ್ರ ಜಗತ್ತು ಉಳಿಯಲು ಸಾಧ್ಯವಿದೆ. ಪಶ್ಚಿಮಘಟ್ಟಗಳು ಮಳೆಯ ಮಾರುತಗಳನ್ನು ತಡೆದು ವ್ಯಾಪಕ ಮಳೆ ಸುರಿಸುತ್ತವೆ. ಇದು ಜೀವವೈವಿಧ್ಯದ 8ನೇ ನೆಚ್ಚಿನ ತಾಣವಾಗಿದ್ದು, ಹಲವು ಪ್ರಭೇದದ ಸಸ್ಯಸಂಕುಲ, ಕೀಟಸಂಕುಲ, ಜೀವಸಂಕುಲದ ತವರಾಗಿದೆ. ಇದನ್ನು ಸರ್ಕಾರ, ಅರಣ್ಯ ಇಲಾಖೆ ಮಾತ್ರ ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಮುಂದಾಗಬೇಕು

12,500 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು:

ತಾವು ಸಚಿವರಾದ ತರುವಾಯ ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ಬೆಲೆಬಾಳುವ 250 ಎಕರೆ ಸೇರಿದಂತೆ ಒಟ್ಟು 12500 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿರುವುದಾಗಿ ಹೇಳಿದ ಅವರು, 50 ಸಾವಿರ ಕೋಟಿ ಬೆಲೆ ಬಾಳುವ ಅರಣ್ಯ ಭೂಮಿಯ ಮರು ವಶಕ್ಕೆ ಕಾನೂನು ಹೋರಾಟ ಮಾಡುತ್ತಿರುವುದಾಗಿ ಹೇಳಿದರು.

ಬೆಂಗಳೂರು ನಗರದ ಶ್ವಾಸತಾಣ ಸಂವರ್ಧನೆಗೆ ಕ್ರಮ:

ಬೆಂಗಳೂರು ನಗರದಲ್ಲಿ ಉಸಿರಾಡಲೂ ಕಷ್ಟವಾಗಬಾರದು ಎಂದು ತಾವು ಅರಣ್ಯ ಸಚಿವರಾದ ತರುವಾಯ ಬೆಂಗಳೂರು ಯಲಹಂಕ ಬಳಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದು, 50 ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು.

ಮಾನವ -ವನ್ಯಜೀವಿ ಸಂಘರ್ಷ ತಡೆಗೆ ಕ್ರಮ:

ರಾಜ್ಯ 6395 ಆನೆಗಳೊಂದಿಗೆ ದೇಶದಲ್ಲೇ ಅತಿ ಹೆಚ್ಚು ಆನೆ ಇರುವ ರಾಜ್ಯವಾಗಿದೆ. ಅದೇ ರೀತಿ ಹುಲಿಯ ಸಂಖ್ಯೆಯಲ್ಲಿ 563 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅದರ ಜೊತೆಗೆ ಮಾನವ-ಆನೆ ಸಂಘರ್ಷವೂ ಹೆಚ್ಚಾಗಿದೆ. ಹೀಗಾಗಿ ಈ ಸಂಘರ್ಷ ತಗ್ಗಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿರುವುದಾಗಿ ಹೇಳಿದರು.

ಮಹಾವನ ನಿರ್ಮಿಸಲು ಶ್ರೀಮಠ ಸಿದ್ಧ : ವಿದ್ಯಾಪ್ರಸನ್ನ ತೀರ್ಥರು.

ಪೇಜಾವರದ ಶ್ರೀ ವಿಶ್ವ ಪ್ರಸನ್ನ ಶ್ರೀಪಾದಂಗಳು ಮಾತನಾಡಿ, ಪೇಜಾವರ ಶ್ರೀಗಳ ಸ್ಮೃತಿವನ ಸಾಕಾರಕ್ಕೆ ಸಹಕಾರ ನೀಡಿದ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಅಭಿನಂದಿಸಿದರು.

2031 ಶ್ರೀ ಪೇಜಾವರ ಮ ಜನ್ಮ ಶತಮಾನೋತ್ಸವ ವರ್ಷವಾಗಿದ್ದು, ಅವರ ಹೆಸರಿನಲ್ಲಿ ಒಂದು ಮಹಾವನ ನಿರ್ಮಿಸುವ ಕನಸಿದೆ. ಸರ್ಕಾರ 1 ಸಾವಿರ ಎಕರೆ ಬರಡು ಭೂಮಿ ನೀಡಿದರೂ ಮಹಾವನ ನಿರ್ಮಿಸಲು ಶ್ರೀಮಠ ಸಿದ್ಧ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಶಾಸಕರಾದ ಯಶಪಾಲ್ ಸುವರ್ಣ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now