
ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭಾರೀ ದಿಢೀರ್
ಪ್ರವಾಹ (Flash Flood) ಹಾಗೂ ಸರಣಿ ದುರಂತಗಳಿಂದಾಗಿ ಕನಿಷ್ಠ 16 ಜನರು ಪ್ರಾಣ ಕಳೆದುಕೊಂಡಿದ್ದು, ಭಾರತದ ಗಡಿ ಭಾಗದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ನೇಪಾಳದಿಂದ ಭಾರತಕ್ಕೆ ಹರಿಯುವ ನದಿಗಳಲ್ಲಿ ನೀರಿನ ಹರಿವು ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ಪಾತ್ರದ ಪ್ರದೇಶಗಳ ಮೇಲೆ ನಿಗಾ ಹೆಚ್ಚಿಸಲಾಗಿದೆ.
ನೇಪಾಳದ ರಸುವಾ ಜಿಲ್ಲೆ ಮತ್ತು ಟಿಬೆಟ್ ಗಡಿ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾದ ಪರಿಣಾಮ ಹಲವು ಗ್ರಾಮಗಳು, ಸೇತುವೆಗಳು ಮತ್ತು ನೂರಾರು ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ
ನೇಪಾಳ ಸೇನೆ ಮತ್ತು ಪೊಲೀಸರು ಹೆಲಿಕಾಪ್ಟರ್ಗಳ ಮೂಲಕ ಸಂತ್ರಸ್ತರ ರಕ್ಷಣೆಗೆ ಇಳಿದಿದ್ದಾರೆ. ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶದಲ್ಲಿ ಕನಿಷ್ಠ 384 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ಮಂದಿ ವಿದೇಶಿಗರು ಮತ್ತು 93 ಮಂದಿ ನೇಪಾಳಿ ಪ್ರಜೆಗಳು. ನಾಪತ್ತೆಯಾದ ವಿದೇಶಿಗರಲ್ಲಿ 105 ಮಂದಿ ಭಾರತೀಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸುವಾ ಜಿಲ್ಲೆಯಲ್ಲಿ ಕನಿಷ್ಠ 26 ನೇಪಾಳ ಪೊಲೀಸ್ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅಲ್ಲದೆ, ಸಶಸ್ತ್ರ ಪೊಲೀಸ್ ಪಡೆಯ ಏಳು ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಮಾಧ್ಯಮ ವರದಿಗಳ ಪ್ರಕಾರ, ಟಿಬೆಟ್ ಗಡಿಯ ಭಾಗದಿಂದ ಪ್ರವಾಹದ ನೀರು ಹರಿದುಬಂದಿದ್ದು, ಹಲವು ಗ್ರಾಮಗಳು ಕೊಚ್ಚಿಹೋಗಿವೆ. ಪ್ರವಾಹದಿಂದ ವ್ಯಾಪಕ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now