ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಮಹಿಳೆ; ಇಬ್ಬರು ಮಕ್ಕಳಿಗಾಗಿ ಮುಂದುವರಿದ ಶೋಧ ಕಾರ್ಯ

ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಮಹಿಳೆ; ಇಬ್ಬರು ಮಕ್ಕಳಿಗಾಗಿ ಮುಂದುವರಿದ ಶೋಧ ಕಾರ್ಯ
0Shares

ಶಿವಮೊಗ್ಗ: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿದ ಆತಂಕಕಾರಿ ಘಟನೆ ಶಿವಮೊಗ್ಗ ನಗರದ ಅರಕೆರೆ ದೇವಾಲಯದ ಸಮೀಪದ ರೈಲ್ವೆ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಸ್ಥಳೀಯ ಯುವಕರ ಸಮಯಪ್ರಜ್ಞೆಯಿಂದ ಮಹಿಳೆ ಹಾಗೂ 11 ತಿಂಗಳ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದ್ದು, 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.

ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಗಮನಿಸಿದ ಸ್ಥಳೀಯರಾದ ನವೀನ್ ಮತ್ತು ದಾದಾಪೀರ್ ಅವರು ತಕ್ಷಣ ನದಿಗೆ ಧುಮುಕಿ ಮಹಿಳೆ ಹಾಗೂ 11 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ.

ಆದರೆ, ಇಬ್ಬರು ಹೆಣ್ಣು ಮಕ್ಕಳು ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ಪತ್ತೆಗಾಗಿ ಕೋಟೆ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾದರು.

ನದಿಯಲ್ಲಿ ನೀರಿನ ಹರಿವು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಶೋಧ ಕಾರ್ಯ ನಡೆಸುವುದು ಸಾಧ್ಯವಾಗಿರಲಿಲ್ಲ. ಇದೀಗ ಮುಳುಗು ತಜ್ಞರ ನೆರವಿನೊಂದಿಗೆ ನಾಪತ್ತೆಯಾಗಿರುವ ಇಬ್ಬರು ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಮೊದಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿದ ನಂತರ, ತನ್ನ ಮಗನೊಂದಿಗೆ ತಾನೂ ನದಿಗೆ ಹಾರಿದ್ದಾರೆ. ಮಹಿಳೆ ಮತ್ತು ಆಕೆಯ ಮಗನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಮಹಿಳೆ ಹಾಗೂ 11 ತಿಂಗಳ ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಮಕ್ಕಳೊಂದಿಗೆ ನದಿಗೆ ಹಾರಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now