
ಉಡುಪಿ ನಗರದಲ್ಲಿರುವ ಖಾದರ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ 10 ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಮೊದಲು ಒಂದು ಅಂಗಡಿಯಲ್ಲಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ಹಾಗೂ ವಿದ್ಯುತ್ ಉಪಕರಣಗಳಿರುವುದರಿಂದ ಕ್ಷಣಾರ್ಧದಲ್ಲಿ ಇತರ ಅಂಗಡಿಗಳಿಗೂ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಬೆಂಕಿಯಿಂದಾಗಿ ಮೊಬೈಲ್ ಪರಿಕರಗಳು, ಹಾರ್ಡ್‌ವೇರ್ ವಸ್ತುಗಳು, ಪ್ಲಾಸ್ಟಿಕ್ ಸಾಮಾನುಗಳು, ಪಾದರಕ್ಷೆಗಳು, ಗೊಂಬೆಗಳು ಹಾಗೂ ಬಟ್ಟೆ ನೂಲಿನ ಅಂಗಡಿಗಳು ಸೇರಿದಂತೆ ಹಲವಾರು ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಹತ್ತಿರದ ಕಟ್ಟಡಕ್ಕೂ ಜ್ವಾಲೆಗಳು ತಟ್ಟಿದವು, ಇದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಯಿತು.
ಘಟನೆ ಸಂಭವಿಸಿದ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಆದರೆ ಸುಮಾರು ಮುಕ್ಕಾಲು ತಾಸು (45 ನಿಮಿಷ) ತಡವಾಗಿ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿತು ಎಂಬ ಆರೋಪ ಕೇಳಿಬಂದಿದೆ. ಪ್ರಾರಂಭದಲ್ಲಿ ಕೇವಲ ಒಂದು ವಾಹನ ಮಾತ್ರ ಬಂದಿದ್ದು, ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಟ್ಟರು. ನಂತರ ಇನ್ನಷ್ಟು ವಾಹನಗಳು ಬಂದ ಬಳಿಕ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿಗೆ ಕಾರಣವೇನು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಸದ್ಯ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ವ್ಯಾಪಾರಿಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಸ್ಥಳೀಯರು ಅಗ್ನಿಶಾಮಕ ದಳದ ತಡ ಆಗಮನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿ ಅಧಿಕಾರಿಗಳ ತನಿಖೆಯ ನಂತರ ತಿಳಿದುಬರುವ ಸಾಧ್ಯತೆ ಇದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now