
ಮಲ್ಪೆ: ಹೆಣ್ಣು ಎಂದರೆ ಮಮತೆಯ ರೂಪ, ಕರುಣೆಯ ಪ್ರತೀಕವಾಗಿದ್ದಾಳೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.
ಅವರು ಭಾನುವಾರ ಚರ್ಚಿನ ಸ್ತ್ರೀ ಸಂಘಟನೆಯ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯ ವಹಿಸಿ ಮಾತನಾಡಿದರು.
ಮಹಿಳೆ ಸಹಜವಾಗಿಯೇ ಪ್ರೀತಿ, ದಯೆ, ಸಹಾನುಭೂತಿ ಮತ್ತು ತ್ಯಾಗದ ಗುಣಗಳನ್ನು ಹೊಂದಿರುವವಳು. ಸಮಾಜದಲ್ಲಿ ತಾಯಿ, ಸಹೋದರಿ, ಪತ್ನಿ ಮುಂತಾದ ವಿವಿಧ ಪಾತ್ರಗಳಲ್ಲಿ ಮಹಿಳೆ ತನ್ನ ಕರುಣೆ, ಸಹನೆ ಮತ್ತು ಮಮತೆಯ ಮೂಲಕ ಕುಟುಂಬ ಹಾಗೂ ಸಮಾಜವನ್ನು ಬೆಳೆಸುವ ಪ್ರಮುಖ ಶಕ್ತಿಯಾಗಿರುತ್ತಾಳೆ.
ಪ್ರತಿಯೊಂದು ಸಂಘಟನೆಗೆ 25 ವರ್ಷಗಳು ಒಂದು ಮೈಲಿಗಲ್ಲು ಈ ಸಂದರ್ಭದಲ್ಲಿ ಹಿಂದಿನ ಕೆಲಸಗಳನ್ನು ಮೆಲುಕು ಹಾಕುವುದರೊಂದಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಸಿಗುವ ಅವಕಾಶವಾಗಿದೆ. 25 ವರ್ಷಗಳಲ್ಲಿ ಚರ್ಚಿನ ಸ್ತ್ರೀ ಸಂಘಟನೆ ತನ್ನ ಸದಸ್ಯರು ಸಬಲೀಕರಣಗೊಳಿಸುವತ್ತ ವಿಶೇಷ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ|ರೆಜಿನಾಲ್ಡ್ ಪಿಂಟೊ ಮಾತನಾಡಿ ಮಹಿಳೆಯರಲ್ಲಿ ಜವಾಬ್ದಾರಿಯುತ ನಾಯಕತ್ವ ಬೆಳೆಸುವತ್ತ ಸಂಘಟನೆ ಕಾರ್ಯಪ್ರವೃತ್ತವಾಗಿದ್ದು ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್, ಕಲ್ಯಾಣಪುರ ವಲಯಾಧ್ಯಕ್ಷೆ ಪ್ರಿಯಾ ಫುರ್ಟಾಡೊ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಸ್ಥಾಪಕಾಧ್ಯಕ್ಷೆ ಲೀನಾ ರೋಚ್ ಕಲ್ಯಾಣಪುರ ವಲಯ ಸಚೇತಕಿ ಪ್ರೇಮಾ ಬಾರೆಟ್ಟೊ, ಕಳೆದ 25 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಹಾಗೂ ರಜತ ಮಹೋತ್ಸವ ವರ್ಷದ ಅಧ್ಯಕ್ಷೆ, ಚರ್ಚಿನ ಆಧ್ಯಾತ್ಮಿಕ ನಿರ್ದೇಶಕ ವಂ|ಡೆನಿಸ್ ಡೆಸಾ ಇವರುಗಳನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಲಯ ಆಧ್ಯಾತ್ಮಿಕ ನಿರ್ದೇಶಕ ವಂ|ಜೋಕಿಂ ಡಿಸೋಜಾ, ಧರ್ಮಗುರುಗಳಾದ ವಂ|ಆಲ್ವಿನ್, ವಂ|ಫ್ರೆಡ್ರಿಕ್ ಡಿಸೋಜಾ, ವಂ|ಸ್ಟೀಫನ್ ರೊಡ್ರಿಗಸ್, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಶ್ಮಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷೆ ಪ್ರಿಯಾ ಫುರ್ಟಾಡೊ ಸ್ವಾಗತಿಸಿ, ಶಾಂತಿ ಫೆರ್ನಾಂಡಿಸ್ ವಂದಿಸಿದರು. ಜೆನಿತಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಂದ ಹಾಗೂ ಪುರುಷರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ರಜತ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೂ ಮುನ್ನ ಪವಿತ್ರ ಬಲಿಪೂಜೆ ಅರ್ಪಿಸಲಾಯಿತು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now