
ಉಡುಪಿ: ಪಡುಬಿದ್ರಿ ಸಮೀಪದ ಹೆಜಮಾಡಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಮೂರ್ತಿಗೆ ಉಡುಪಿ ಶ್ರೀ ಕೃಷ್ಣ ಮಠದ ವಿಶ್ವಗೀತಾ ಪರ್ಯಾಯೋತ್ಸವದ ಸ್ಮರಣಾರ್ಥವಾಗಿ ಭಕ್ತಿಪೂರ್ವಕವಾಗಿ ಸ್ವರ್ಣ ಅಟ್ಟೆ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಭಗವದ್ಭಕ್ತರ ಸಹಕಾರದಿಂದ ಈ ಸ್ವರ್ಣಖಚಿತ ಅಟ್ಟೆ–ಪ್ರಭಾವಳಿಯನ್ನು ದೇಣಿಗೆಯಾಗಿ ನೀಡಲಾಗಿದ್ದು, ಈ ಸಂಬಂಧ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಅಶ್ವತ್ಥ ಕಟ್ಟೆಯಿಂದ ಆರಂಭವಾದ ಭವ್ಯ ಮೆರವಣಿಗೆ ಗ್ರಾಮ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿತು.
ನಂತರ ದೇವಸ್ಥಾನ ಸನ್ನಿಧಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಸ್ವರ್ಣ ಅಟ್ಟೆ–ಪ್ರಭಾವಳಿಯನ್ನು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಿಸಿದರು. ಈ ಪವಿತ್ರ ಸಂದರ್ಭದಲ್ಲಿ ದೇವಾಲಯದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಮರ್ಪಣೆಯು ದೇವರ ಕೃಪೆ ಹಾಗೂ ಗ್ರಾಮ ಸಮೃದ್ಧಿಗೆ ಕಾರಣವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಭಕ್ತಿಭಾವದಿಂದ ಸಂಪನ್ನಗೊಂಡಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now