
ಕುಂದಾಪುರ, ಜುಲೈ : ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಮುಖ್ಯ ಕಚೇರಿ, ಕುಂದಾಪುರದಲ್ಲಿ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಭೆಯು ಯಶಸ್ವಿಯಾಗಿ ನಡೆಯಿತು. ಸಂಸ್ಥೆಯ ಅಭಿವೃದ್ಧಿ, ಆಡಳಿತಾತ್ಮಕ ಕಾರ್ಯಕ್ಷಮತೆ, ಶಿಸ್ತು, ಭದ್ರತೆ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆಗಳು ನಡೆದವು. ಸಭೆಯಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಭಾಗವಹಿಸಿ, ಸಂಸ್ಥೆಯ ಅಭಿವೃದ್ಧಿಯತ್ತ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶ್ರೀಮತಿ ಮೇಬಲ್ ಡಿ’ಅಲ್ಮೇಡಾ ಅವರು ಸಭೆಗೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಆಹ್ವಾನಿಸಿ, ಸಭೆಯ ಕಾರ್ಯಸೂಚಿ (Agenda)ಯನ್ನು ವಿವರಿಸಿದರು. ಬಳಿಕ ಶ್ರೀ ರೋಹನ್ ಅವರು ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಅಲ್ಮೇಡಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಕಿರಣ್ ಲೋಬೊ, ನಿರ್ದೇಶಕರಾದ ಶ್ರೀ ಫಿಲಿಪ್ ಡಿಕೋಸ್ಟಾ, ಶ್ರೀ ಒಜ್ಲಿನ್ ರೆಬೆಲ್ಲೊ, ಶ್ರೀ ವಿಲ್ಸನ್ ಡಿಸೋಜಾ, ಶ್ರೀ ಟೆರೆನ್ಸ್ ಸುವಾರಿಸ್,ಶ್ರೀ ವೆಲೆಂಟೈನ್ ಡಿಸೋಜಾ, ಶ್ರೀ ಲಿಪ್ಟನ್ ಒಲಿವೇರಾ, ಶ್ರೀಮತಿ ಡಯಾನಾ ಡಿ’ಅಲ್ಮೇಡಾ ಹಾಗೂ ಶ್ರೀಮತಿ ಶಾಂತಿ ಕರ್ವಾಲ್ಲೊ ಉಪಸ್ಥಿತರಿದ್ದರು.

ಮೊದಲಿಗೆ ನಿರ್ದೇಶಕರಾದ ಶ್ರೀ ವಿಲ್ಸನ್ ಡಿಸೋಜಾ ಅವರು ಸಂಸ್ಥೆಯ ಪ್ರಗತಿಗಾಗಿ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸಂಸ್ಥೆಯ ಸೇವೆಗಳು ಹಾಗೂ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಸಾಮಾಜಿಕ ಮಾಧ್ಯಮಗಳ ಮಹತ್ವವನ್ನು ಅವರು ವಿವರಿಸಿದರು.
ನಂತರ ನಿರ್ದೇಶಕರಾದ ಶ್ರೀ ವೆಲೆಂಟೈನ್ ಡಿಸೋಜಾ ಅವರು ಸಂಸ್ಥೆಯಲ್ಲಿ ಶಿಸ್ತು, ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ಸಿಬ್ಬಂದಿಯೂ ನಿಯಮಾನುಸಾರ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಉತ್ತಮ ಹೆಸರು ಉಳಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಅಲ್ಮೇಡಾ ಅವರು ಸಂಸ್ಥೆಯ ಪ್ರಸ್ತುತ ಬೆಳವಣಿಗೆ, ಸಾಧನೆಗಳು ಹಾಗೂ ಮುಂದಿನ ಗುರಿಗಳ ಕುರಿತು ಮಾತನಾಡಿ, ಪ್ರತಿಯೊಬ್ಬ ಸಿಬ್ಬಂದಿಯೂ ಹೆಚ್ಚಿನ ಬದ್ಧತೆ, ಆಸಕ್ತಿ ಮತ್ತು ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿ, ನಿಗದಿಪಡಿಸಲಾದ ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ಸಾಧಿಸುವಂತೆ ಪ್ರೋತ್ಸಾಹಿಸಿದರು. ಜೊತೆಗೆ, ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅಗತ್ಯ ಮಾರ್ಗದರ್ಶನ ಹಾಗೂ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.
ಕೊನೆಯಲ್ಲಿ ಸಿಬ್ಬಂದಿಯಾದ ಶ್ರೀ ಸಾಗರ್ ಡಿಸೋಜಾ ಅವರು ವಂದನಾರ್ಪಣೆ ಸಲ್ಲಿಸಿ, ಸಭೆಯನ್ನು ಯಶಸ್ವಿಗೊಳಿಸಿದ ಅಧ್ಯಕ್ಷರು, ನಿರ್ದೇಶಕರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now